ಬೆಂಗಳೂರು: ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್ ಅವರಿಗೆ ಜೆಡಿಎಸ್ ಕಟುವಾಗಿ ತಿರುಗೇಟು ಕೊಟ್ಟಿದೆ.
ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಡಿ.ಕೆ.ಸುರೇಶ್ ಅವರ ಮೇಲೆ ಪ್ರಹಾರ ನಡೆಸಿರುವ ಪಕ್ಷವು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಹೋರಾಟವು ನಿಸ್ವಾರ್ಥ ಮತ್ತು ಸ್ವಾರ್ಥ, ಸೇವೆ ಮತ್ತು ಸುಲಿಗೆ, ಒಳಿತು ಮತ್ತು ಕೆಡುಕಿನ ನಡುವೆ ಹೋರಾಟ ಎಂದು ಬಣ್ಣಿಸಿದೆ.
ಡಾ.ಸಿ.ಎನ್.ಮಂಜುನಾಥ್ v/s ಡಿ.ಕೆ.ಸುರೇಶ್; ನಿಸ್ವಾರ್ಥ vs ಸ್ವಾರ್ಥ!; ಸೇವೆ v/s ಸುಲಿಗೆ!!; ಒಳಿತು v/s ಕೆಡುಕು!!! ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಡಿ.ಕೆ.ಸುರೇಶ್ ರವರೇ ನೀವೇನು? ಡಾ.ಸಿ.ಎನ್. ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಕ್ಷೇತ್ರದಲ್ಲಿ ಎಣೆ ಇಲ್ಲದಷ್ಟು ಸೇವೆ ಮಾಡಿ ಲಕ್ಷಾಂತರ ಬಡಜನರ ಹೃದಯದಲ್ಲಿ ನೆಲೆಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಅನಾರೋಗ್ಯಕರ ಅಪಪ್ರಚಾರದಲ್ಲಿ ನೀವು ನಿರತರಾಗಿದ್ದೀರಿ. ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ ಎಂದು ಜೆಡಿಎಸ್ ತಿರುಗೇಟು ಕೊಟ್ಟಿದೆ.
ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ? ಇಡೀ ರಾಜ್ಯ ನಿಮ್ಮ ಕಬಂಧಬಾಹುಗಲ್ಲಿ ಬಂಧಿಯಾಗಿದೆ. ಅಣ್ಣ ಡಿಸಿಎಂ, ತಮ್ಮ ಎಂಪಿ, ಸಹೋದರಿಯ ಗಂಡ ವಿಧಾನ ಪರಿಷತ್ ಸದಸ್ಯ, ಇನ್ನೊಬ್ಬರು ಕುಣಿಗಲ್ ಶಾಸಕ. ಇದೇನು ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ? ನೀವು ಏನೆಂದು ಕರೀತೀರಿ ಡಿ.ಕೆ.ಸುರೇಶ್ ರವರೇ? ಎಂದು ಖಾರವಾಗಿ ಪ್ರಶ್ನಿಸಿದೆ ಜೆಡಿಎಸ್.
ಅಳಿಯ ಜಾಣ ಆಗೋದು ತಪ್ಪಲ್ಲ. ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ? ಡಾ.ಮಂಜುನಾಥ್ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೆ ನಿಮಗೇನು? ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಮ್ಮ ಎದುರಾಳಿ, ಸೆಣಸಿ. ಅದು ಬಿಟ್ಟು ವ್ಯರ್ಥ ಆಲಾಪ ಏಕೆ ಸುರೇಶ್ ರವರೇ? ಎಂದು ಜೆಡಿಎಸ್ ಟಾಂಗ್ ನೀಡಿದೆ.
ದೇವೇಗೌಡರ ಪಾರ್ಟಿ ಕಥೆ ಇರಲಿ, ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಕರ್ಮಕಾಂಡದ ಬಗ್ಗೆ ಹೇಳುತ್ತಾ ಹೋದರೆ ಅದೇ ಮಹಾ ಕಾದಂಬರಿ ಆಗುತ್ತದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದವರ ತಟ್ಟೆಯಲ್ಲಿ ನೊಣ ಹುಡುಕುವ ದಡ್ಡತನವೇಕೆ? ಅಕ್ವರ್ಡ್ ಪದಕ್ಕೆ ನಿಮಗಿಂತ ಸರಿಯಾದ ಅನ್ವರ್ಥ ಇದೆಯೇ? ಏನಂತೀರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.