ನವದೆಹಲಿ : ರಾಸಾಯನಿಕ ಶಸ್ತ್ರಾಸ್ತ್ರ (ಕೆಮಿಕಲ್ ವೆಪೆನ್) ತಯಾರಿಸುತ್ತಿದ್ದ ಹಾಗೂ ಮುಸ್ಲಿಂ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ʻಖಿಲಾಫತ್ʼ ಮಾದರಿ ಅನುಸರಿಸುತ್ತಿದ್ದ ಐವರು ಶಂಕಿತ ಐಸಿಸ್ ಉಗ್ರರನ್ನು ವಿವಿಧ ರಾಜ್ಯಗಳಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.
ಬಂಧಿತ ಐವರು ಉಗ್ರ ಸಂಘಟನೆಯ ಸ್ಲೀಪರ್ ಮಾಡ್ಯೂಲ್‌ನ ಭಾಗವಾಗಿದ್ದರು. ಬಾಂಬ್‌ಗಳನ್ನ ತಯಾರಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಹಾಗೂ ಮುಸ್ಲಿಂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಖಿಲಾಫತ್ ರಾಜ್ಯ ಸ್ಥಾಪನೆ ಎಂದರೆ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಎಂದರ್ಥ. ಅದರಂತೆ ಒಂದು ಸ್ಥಳವನ್ನು ಆಕ್ರಮಣ ಮಾಡಿಕೊಂಡು ನಂತರ ಅಲ್ಲಿ ಜಿಹಾದ್ ಚಟುವಟಿಕೆ ನಡೆಸುವುದನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದಿಂದ ಈ ಮಾದರಿಯನ್ನ ನಿರ್ವಹಿಸಲಾಗಿದೆ. ಉಗ್ರರು ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು ಅನ್ನೋ ರಹಸ್ಯವೂ ಬಯಲಾಗಿದೆ. ಡ್ಯಾನಿಶ್ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತನಾಗಿದ್ದ ಎಂದು ತಿಳಿದುಬಂದಿದೆ.














