ಮನೆ ಕಾನೂನು ಕುಡಿವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಹೈಕೋರ್ಟ್ ತರಾಟೆ

ಕುಡಿವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಹೈಕೋರ್ಟ್ ತರಾಟೆ

0

“ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಕನಿಷ್ಠ ಅವಶ್ಯತೆ. ಇದನ್ನು ಮಾಡದಿರುವುದು ನಾಚಿಕೆಗೇಡಿನ ವಿಚಾರವಲ್ಲವೇ?” ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

Join Our Whatsapp Group


ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ರಾಜ್ಯದ ಸುಮಾರು ನಾಲ್ಕು ಸಾವಿರ ಶಾಲೆಗಳಲ್ಲಿ ಕುಡಿಯುವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯ, ಕಾಂಪೌಂಡ್, ಆಟದ ಮೈದಾನದ ವ್ಯವಸ್ಥೆ ಇಲ್ಲದಿರುವುದು ಮತ್ತು ಮಾಡಬೇಕಿರುವ ಸುಧಾರಣೆಗಳ ಕುರಿತಾದ ಶಿಫಾರಸ್ಸುಗಳನ್ನು ಒಳಗೊಂಡ ವರದಿ ಸಲ್ಲಿಕೆಯಾಗಿರುವ ಬಗ್ಗೆ ಪೀಠದ ಗಮನಸೆಳೆದರು.
ಆಗ ನ್ಯಾಯಾಲಯವು “ಹಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಗಂಭೀರ ವಿಷಯ. ಈ ನಿಟ್ಟಿನಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ. ಯಾವಾಗ ಈ ಶಾಲೆಗಳನ್ನು ಆರಂಭಿಸಲಾಗಿದೆ. ಶಿಕ್ಷಕರು ಇಲ್ಲ, ಕೊಠಡಿಗಳು ಇಲ್ಲ ಎಂದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಗಂಭೀರ ವಿಚಾರ” ಎಂದು ಬೇಸರಿಸಿತು.
“ಶಾಲೆಯ ಮೇಲ್ವಿಚಾರಕರು ಇದ್ದಾರಲ್ಲವೇ? ಕಾಲಕಾಲಕ್ಕೆ ಅವರು ವರದಿ ಸಲ್ಲಿಸಬೇಕಲ್ಲವೇ? ಮೇಲಧಿಕಾರಿಗಳು ಆ ವರದಿಯನ್ನು ಪರಿಶೀಲಿಸಿದ್ದಾರೆಯೇ? ವರದಿ ಸಲ್ಲಿಸಲಾಗಿದೆ ಎಂದರೆ ಏನು ಪ್ರಯೋಜನ? ಮೇಲಧಿಕಾರಿಗಳು ಏನು ಮಾಡುತ್ತಿದ್ದಾರೆ? ಇದು ವಿಷಾದನೀಯ ಪರಿಸ್ಥಿತಿ” ಎಂದಿತು.
“ಮೇಲ್ವಿಚಾರಕರು ಜಿಲ್ಲಾ ಕೇಂದ್ರದಲ್ಲಿ ತಮ್ಮ ಕಚೇರಿಗಳಲ್ಲಿ ಕುಳಿತುಕೊಂಡಿದ್ದಾರೆಯೇ? ಅವರಿಂದ ನಿರೀಕ್ಷಿಸಿದ ಕ್ರಮಗಳನ್ನು ನಿಮ್ಮ ಪ್ರಾಧಿಕಾರಗಳು ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರನ್ನು ನಾವು ಊಹಿಸಲಾಗದು” ಎಂದು ಪೀಠವು ಅಸಮಾಧಾನ ಹೊರಹಾಕಿತು.
“ನೀವು ಸಲ್ಲಿಸಿರುವ ಪಟ್ಟಿಯಲ್ಲಿ ಒಂದೇ ಒಂದು ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದರ ಕುರಿತು ಉಲ್ಲೇಖವಿಲ್ಲ. ಇದು ಹೇಗೆ? ಹೆಣ್ಣು ಮಕ್ಕಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕನಿಷ್ಠ ಅವಶ್ಯಕತೆ” ಎಂದು ಒತ್ತಿ ಹೇಳಿತು.
“ಕಲಬುರ್ಗಿಯಲ್ಲಿ 2,000 ಶಾಲೆಗಳ ಪೈಕಿ 22 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 126 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. 2013ರಲ್ಲಿ ಪ್ರಕರಣದ ಕುರಿತು ಸಂಜ್ಞೇಯ ಪರಿಗಣಿಸಲಾಗಿದ್ದು, ಈಗ 2023ರಲ್ಲಿ ಇದ್ದೇವೆ. ಹತ್ತು ವರ್ಷಗಳಾದರೂ ಪರಿಸ್ಥಿತಿ ಸುಧಾರಿಸಿಲ್ಲ. ಬದಲಿಗೆ ಕೆಟ್ಟದ್ದರಿಂದ ದಯನೀಯ ಸ್ಥಿತಿಗೆ ಪರಿಸ್ಥಿತಿ ಹೋಗುತ್ತಿದೆ” ಎಂದು ಕಿಡಿಕಾರಿತು.

“ಸಣ್ಣ ಪಟ್ಟಣ ಅಥವಾ ಹಳ್ಳಿಯಲ್ಲಿ ಹೆಣ್ಣು ಅಥವಾ ಗಂಡು ಮಗು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದೆ ಎಂದ ಮಾತ್ರಕ್ಕೆ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಏಕೆ ಮಾಡುತ್ತಿಲ್ಲ. ಇದು ನಮಗೆ ನಾಚಿಕೆಗೆ ಆಗುವ ವಿಚಾರ ಅಲ್ಲವೇ?” ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.
ಅಂತಿಮವಾಗಿ ಅಮಿಕಸ್ ಕ್ಯೂರಿ ಅವರು ಸಲ್ಲಿಸಿರುವ ಶಿಫಾರಸ್ಸು ವರದಿಗೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದರ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 15ಕ್ಕೆ ನ್ಯಾಯಾಲಯ ಮುಂದೂಡಿತು.