ಮನೆ ಮನರಂಜನೆ “ಸಿನಿಮಾ ನಿಷೇಧ ಅತಿರೇಕವಲ್ಲವೇ?” : ಕಮಲ್ ಹಾಸನ್ ವಿವಾದದ ಕುರಿತಾಗಿ ನಟಿ ರಮ್ಯಾ ಪ್ರತಿಕ್ರಿಯೆ

“ಸಿನಿಮಾ ನಿಷೇಧ ಅತಿರೇಕವಲ್ಲವೇ?” : ಕಮಲ್ ಹಾಸನ್ ವಿವಾದದ ಕುರಿತಾಗಿ ನಟಿ ರಮ್ಯಾ ಪ್ರತಿಕ್ರಿಯೆ

0

ಬೆಂಗಳೂರು: ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ನಟ ಕಮಲ್ ಹಾಸನ್‌ ವಿರುದ್ಧ ರಾಜ್ಯದ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರ ಹೊಸ ಸಿನಿಮಾ ‘ಥಗ್ ಲೈಫ್’ ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿವೆ. ಈ ವಿವಾದದ ನಡುವೆಯೇ ಹಿರಿಯ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಮ್ಯಾ ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಕಮಲ್ ಹಾಸನ್ ಅವರು ತಪ್ಪು ಮಾಡಿದ್ದಾರೆ? ಆದರೆ, ಅದರ ಆಧಾರದ ಮೇಲೆ ಅವರ ಸಿನಿಮಾ ನಿಷೇಧಿಸುವುದು ಅತಿರೇಕವಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಅವರು ದ್ರಾವಿಡ ಭಾಷೆಗಳ ಉಗಮವನ್ನು ವಿವರಿಸುವ ಕೋಷ್ಠಕವೊಂದನ್ನು ಹಂಚಿಕೊಂಡಿದ್ದಾರೆ.

ರಮ್ಯಾ ಹಂಚಿಕೊಂಡ ಮಾಹಿತಿಯ ಪ್ರಕಾರ, ದ್ರಾವಿಡ ಭಾಷಾ ಕುಟುಂಬದಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮೊದಲಾದ ಭಾಷೆಗಳು ಅಭಿವೃದ್ಧಿಯಾಗಿವೆ. ಈ ಭಾಷೆಗಳ ನಡುವೆ ಪರಸ್ಪರ ಸಾಮ್ಯತೆಗಳಿವೆ. “ಯಾವ ಭಾಷೆಯೂ ಇನ್ನೊಂದರಿಗಿಂತ ಶ್ರೇಷ್ಠವಲ್ಲ. ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂಬ ಭ್ರಾಂತಿಯಲ್ಲಿ ಇದ್ದಾರೆ. ಆದರೆ ಅದು ಇಂಡೋ-ಆರ್ಯನ್ ಭಾಷೆ. ನಾವು ದ್ರಾವಿಡರು. ಇಂಡೋ-ಆರ್ಯನ್ ಭಾಷೆಗಳು ದಕ್ಷಿಣಕ್ಕೆ ವಲಸೆ ಬರುವುದಕ್ಕೂ ಮೊದಲು ನಾವೇ ಇಲ್ಲಿದ್ದೆವು” ಎಂದು ಅವರು ನೆನಪಿಸಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. “ನಾವು ಹಿಂದಿ ಹೇರಿಕೆಯ ವಿರುದ್ಧ ಒಂದಾಗಿ ಹೋರಾಟ ಮಾಡಬೇಕು. ಆದರೆ ಅದಕ್ಕೂ ಮುನ್ನ, ಪರಸ್ಪರ ಭಾಷೆಗಳ, ಸಂಸ್ಕೃತಿಗಳ ಬಗ್ಗೆ ಗೌರವ ಇರಬೇಕು. ಈ ವಿಚಾರದಲ್ಲಿ ಸಹನಶೀಲತೆ ಮುಖ್ಯ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.