ಆಂಧ್ರಪ್ರದೇಶ: ಇಸ್ರೋದ ಮಹತ್ವಾಕಾಂಕ್ಷೆಯ ಮೊದಲ ಮಾನವ ರಹಿತ ಗಗನಯಾನ ಯೋಜನೆಯ ಭಾಗವಾಗಿ ಶನಿವಾರ (ಅ. 21) ಶ್ರೀಹರಿಕೋಟಾದಿಂದ ನಡೆಸಿದ “ಗಗನಯಾನ” ಸುರಕ್ಷತಾ ಪ್ರಯೋಗ” ಯಶಸ್ವಿಯಾಗಿದೆ.
ಮಾನವರಹಿತ ಗಗನಯಾನ ಯೋಜನೆಯ ಅಂಗವಾಗಿ ಗಗನಯಾನ ನೌಕೆಯ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ ಗಗನ ಯಾತ್ರಿಕರ ಸುರಕ್ಷಿತ ಲ್ಯಾಂಡಿಂಗ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಇಸ್ರೋ ಸುರಕ್ಷತಾ ಪ್ರಕ್ರಿಯೆಯ ಪ್ರಯೋಗ ನಡೆಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕೈಗೊಂಡ ಗಗನಯಾನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ನಮ್ಮ ಯೋಜನೆ ಯಶಸ್ವಿ ಕಂಡಿರುವುದಾಗಿ ಹೇಳಲು ತುಂಬಾ ಸಂತೋಷವಾಗುತ್ತಿದೆ. ಗಗನ ಯಾತ್ರಿಕರ ಸುರಕ್ಷಿತ ಲ್ಯಾಂಡಿಂಗ್ ಪ್ರಕ್ರಿಯೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಇಸ್ರೋದ ವಿಜ್ಞಾನಿ ಎಸ್.ಸೋಮನಾಥ್ ತಿಳಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಟಿವಿ-ಡಿ 1 ಪ್ರಯೋಗಾರ್ಥ ಪರೀಕ್ಷೆಯನ್ನು ಶನಿವಾರ ಬೆಳಗ್ಗೆ 8ಗಂಟೆಗೆ ನಡೆಸುವುದಾಗಿ ಉದ್ದೇಶಿಸಿದ್ದು, ನಂತರ 8.45ಕ್ಕೆ ಎಂದು ಸಮಯ ನಿಗದಿಪಡಿಸಿತ್ತು. ಆದರೆ ಕ್ರ್ಯೂ ಎಸ್ಕೇಪ್ ಸಿಸ್ಟಂ(ಸಿಇಎಸ್)ನ ಪ್ರಯೋಗವನ್ನು ಕೊನೆಯ 5 ನಿಮಿಷದಲ್ಲಿ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿ, ಸರಿಪಡಿಸಿದ ನಂತರ ಇಸ್ರೋ 10ಗಂಟೆಗೆ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿರುವುದಾಗಿ ತಿಳಿಸಿದೆ.