ಮನೆ ರಾಜಕೀಯ ಇಡಿ ಹೆಸರು ಬದಲಾಯಿಸಿ ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಇಡುವುದು ಸೂಕ್ತ : ದಿನೇಶ್ ಗುಂಡೂರಾವ್...

ಇಡಿ ಹೆಸರು ಬದಲಾಯಿಸಿ ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಇಡುವುದು ಸೂಕ್ತ : ದಿನೇಶ್ ಗುಂಡೂರಾವ್ ಕಿಡಿ

0

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಂಡಿರುವ ಜಾರಿ ನಿರ್ದೇಶನಾಲಯದ (ಇಡಿ) ಧೋರಣೆಯನ್ನು ಕಟುವಾಗಿ ಟೀಕಿಸಿದ ಸಚಿವ ದಿನೇಶ್ ಗುಂಡೂರಾವ್, ಇಡಿಗೆ ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂಬ ಹೆಸರನ್ನು ಇಡುವುದೇ ಸೂಕ್ತವಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕರು ಮತ್ತು ಸಂಸದರ ನಿವಾಸಗಳಲ್ಲಿ ಇಡಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ‘ಎಕ್ಸ್’ (ಹಳೆಯ ಟ್ವಿಟರ್) ನಲ್ಲಿ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಇಡಿಯ ವೈಶಿಷ್ಟ್ಯ ಎಂದರೆ ಅದು ಬಿಜೆಪಿಯೇತರ ನಾಯಕರ ವಿರುದ್ಧ ಮಾತ್ರ ದಾಳಿ ನಡೆಸುವುದು. ಇದುವರೆಗೂ ಒಂದೊಮ್ಮೆಯಾದರೂ ಕೂಡ ಬಿಜೆಪಿ ನಾಯಕರ ಮೇಲೆ ಇಡಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.

ತಮಿಳುನಾಡಿನ ಟಿಎಎಸ್‌ಎಂಎಸಿ ಹಗರಣದ ವಿಚಾರದಲ್ಲಿ ಇಡಿಯ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದ್ದು, ಇಡಿ ತನ್ನ ಸಂವಿಧಾನಾತ್ಮಕ ಮಿತಿಗಳನ್ನು ಮೀರುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿರುವ ಉದಾಹರಣೆ ನೀಡಿದ ಅವರು, ಕೇಂದ್ರ ಸರ್ಕಾರ ಇಡಿಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದರು.

ಇಡಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಗುಂಡೂರಾವ್ ಅಭಿಪ್ರಾಯಪಟ್ಟರು. ಒಂದು ರಾಜಕೀಯ ಪಕ್ಷದ ಆಜ್ಞಾಪಾಲಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಅವರು ಎಸೆದರು.

ಇಡಿಯ ಕ್ರಮಗಳು ಸ್ಪಷ್ಟವಾಗಿ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳನ್ನು ಉದ್ದೇಶಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಗುಂಡೂರಾವ್, “ಕಾಂಗ್ರೆಸ್ ನಾಯಕರ ಮನೆಯಲ್ಲಿಯೇ ದಾಳಿ ನಡೆಯುತ್ತಿದ್ದು, ಇದು ಸಂವಿಧಾನಾತ್ಮಕ ಪ್ರಕ್ರಿಯೆಗಳ ಅಪಮಾನ” ಎಂದರು.