ಮೈಸೂರು: ಪ್ರಸ್ತುತ ದಿನಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯದಲ್ಲಿ ಆಗುವ ಸಣ್ಣ ಬದಲಾವಣೆಯು ಮುಂದೆ ಆತನನ್ನು ದೊಡ್ಡ ಕಾಯಿಲೆಗೆ ಗುರಿ ಮಾಡುತ್ತದೆ ಹಾಗಾಗಿ ಯಾವುದೇ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ ಗಾಯತ್ರಿ ಅವರು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವತಿಯಿಂದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೋ ಜನರು ಮುಜುಗರದಿಂದ ತಮ್ಮಲ್ಲಿರುವ ಸಮಸ್ಯೆಗಳನ್ನು ಮುಚ್ಚಿಟ್ಟು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಇದರಿಂದ ಮುಂದೆ ಆ ವ್ಯಕ್ತಿಗೆ ದೊಡ್ಡ ಅನಾಹುತಗಳು ಎದುರಾಗುವ ಸಂದರ್ಭಗಳು ಬರಬಹುದು. ಆದ್ದರಿಂದ ಸಾರ್ವಜನಿಕರಗಲಿ ಅಧಿಕಾರಿಗಳಾಗಲಿ ಯಾವುದೇ ಮುಜುಗರ ಪಡದೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಅಧಿಕಾರಿಗಳು ಕೆಲಸದ ಒತ್ತಡದಿಂದ ತಮ್ಮ ಆರೋಗ್ಯದ ಕಾಳಜಿಯನ್ನು ಮರೆಯುತ್ತಾರೆ. ಮೊದಲು ಅರೋಗ್ಯ ಮುಖ್ಯ ಎಂದು ತಿಳಿದು ಅರೋಗ್ಯ, ಕೆಲಸಹಾಗೂ ಕುಟುಂಬವನ್ನು ಸಮಾನವಾಗಿ ನಿರ್ವಹಣೆ ಮಾಡುವುದನ್ನು ಕಲಿಯಬೇಕು. ಯಾವುದೇ ಸಮಸ್ಯೆಯನ್ನು ಸಮಾಧಾನದಿಂದ ಎದುರಿಸುವುದನ್ನು ಕಲಿಯಬೇಕು ಎಂದರು.
ಮಾನಸಿಕ ಅರೋಗ್ಯ ಸಮಸ್ಯೆಗಳು ಅತಿಯಾದ ಕೆಲಸದ ಒತ್ತಡ, ಕಿನ್ನತೆ ಜೀವನ ಶೈಲಿಯ ಬದಲಾವಣೆಯಿಂದ, ಆಹಾರ ಪದ್ದತಿಯ ಬದಲಾವಣೆ ಬರುತ್ತದೆ. ಇದರಿಂದ ಕಾಯಿಲೆಗಳು ವೇಗವಾಗಿ ನಮ್ಮ ಬಳಿ ಬರುವಂತೆ ಮಾಡಿಕೊಳ್ಳುತ್ತೇವೆ. ಪ್ರಸ್ತುತ ಜನರು ಕುಳಿತಲ್ಲಿಯೇ ಎಲ್ಲವನ್ನು ಬಯಸುವ ಕಾಲ ಬಂದಿದ್ದು, ಈ ಅಭ್ಯಾಸ ಸಾರ್ವಜನಿಕರನ್ನು ಬಹಳ ಬೇಗನೆ ಅನಾರೋಗ್ಯಕ್ಕೆ ಗುರಿಯಾಗುವಂತೆ ಮಾಡುತ್ತದೆ ಎಂದು ಹೇಳಿದರು.
ಶಾಲಾ-ಕಾಲೇಜು ಹಂತಗಳಲ್ಲೆ ಮಾನಸಿಕ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಣ ನೀಡಿ ಅವರು ಮುಂದಿನ ಜೀವನದಲ್ಲಿ ಎಂತಹ ಸಮಸ್ಯೆಯನ್ನಾದರೂ ಎದುರಿಸುವಂತಹ ಶಕ್ತಿ ತುಂಬಿ ಅವರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು. ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸರಿಯಾದ ಮಾರ್ಗದರ್ಶಕರು ಇದ್ದಾಗ ಯಾವುದೇ ವ್ಯಕ್ತಿಯು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸದಂತೆ ನೋಡಿಕೊಳ್ಳಬಹುದು ಎಂದರು.
ಇಂದು ಆಯೋಜಿಸಿರುವ ಮಾನಸಿಕ ಅರೋಗ್ಯ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಿಡಿಒಗಳು ಹಾಗೂ ಇ ಒ ಗಳು ಸೇರಿದಂತೆ ಸುಮಾರು 159 ಅಧಿಕಾರಿಗಳು ಪಾಲ್ಗೊಂಡು ಶಿಬಿರಾದ ಸದುಪಯೋಗ ಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಬೇಕು. ಈ ರೀತಿಯ ಕ್ಯಾಂಪ್ಗಳ್ಳನ್ನು ಮಾಡುವುದು ಅಧಿಕಾರಿಗಳ ಒಳಿತಿಗಾಗಿ ಹಾಗಾಗಿ ಪ್ರತಿಯೊಬ್ಬ ಅಧಿಕಾರಿಗಳು ಅದನ್ನು ಅರಿತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪಿ ಕುಮಾರಸ್ವಾಮಿ ಅವರು ಮಾತನಾಡಿ, ಆರೋಗ್ಯ ಇಲಾಖೆಯು ಪ್ರಮುಖ ಇಲಾಖೆಗಳಲ್ಲಿ ಒಂದಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇಲಾಖೆಯ ವತಿಯಿಂದ ನೂರಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಲ್ಲದೆ ಸಮುದಾಯದ ಹಂತದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಸುಮಾರು 25ಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇಲಾಖೆಯ ವತಿಯಿಂದ ವೃದ್ಧರಿಗೆ, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸುಮಾರು 628 ವಿವಿಧ ಸಂಸ್ಥೆಗಳಲ್ಲಿ ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ. ಇನ್ನು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇದನ್ನು ಸಾಕಷ್ಟು ಅಧಿಕಾರಿಗಳು ಸದುಪಯೋಗಪಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಆಗಮಿಸಿ ಇದರ ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.
ಜಿಲ್ಲಾ ಮಾನಸಿಕ ಹಾಗೂ ಕುಷ್ಟರೋಗ ನಿರ್ಮೂಲನಾಧಿಕಾರಿಗಳಾದ ಬೃಂದಾ ಅವರು ಮಾತನಾಡಿ, ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು “ಕೆಲಸದ ಸಮಯದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ” ಎಂಬ ಘೋಷವಾಕ್ಯವನ್ನು ನೀಡಿದೆ. ಹಾಗಾಗಿ ಅಧಿಕಾರಿಗಳ ಕೆಲಸದ ಸಮಯದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು 1992 ರ ಅಕ್ಟೋಬರ್ 10 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ವತಿಯಿಂದ ಜಾಗತಿಕ ಮಟ್ಟದಲ್ಲಿ ಮಾನಸಿಕ ಅರೋಗ್ಯವನ್ನು ಉತ್ತೇಜಿಸುವಲ್ಲಿ ಹಾಗೂ ಮಾನಸಿಕ ಆರೋಗ್ಯದ ಪರಿಸ್ಥಿತಿಗೆ ಒಳಗಾದ ಜನರ ಒಳಿತಿಗಾಗಿ ಈ ದಿನಾಚರಣೆಯನ್ನು ಪ್ರಾರಂಭ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾನಸಿಕ ಆರೋಗ್ಯ ಸಮಸ್ಯೆ ಎಂಬುದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, 14 ವರ್ಷದ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರೌಢವಸ್ಥೆ, ಶರೀರಕ ಬದಲಾವಣೆ, ಶಾಲೆಗಳನ್ನು ಬದಲಾಯಿಸುವುದು ಅಥವಾ ಉನ್ನತ ವ್ಯಾಸಂಗಕ್ಕೆ ತೆರಳುವುದು ಈ ರೀತಿಯ ಕಾರಣಗಳಿಂದ ಮತ್ತು ಸಾಮಾಜಿಕ ಜಾಲತಾಣಗಳ ಸಂಪರ್ಕ ಮತ್ತು ಅತಿಯಾದ ಬಳಕೆಯಿಂದ ಈ ರೀತಿಯ ತೊಂದರೆಗಳಿಗೆ ಒಳಗಗುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಿ ಅವರಲ್ಲಿರುವ ತಪ್ಪು ಕಲ್ಪನೆಗಳು, ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ತೊಂದರೆಗೆ ಒಳಗಾದಂತಹ ವ್ಯಕ್ತಿಗಳಿಗೆ ಕೌನ್ಸಿಲಿಂಗ್ ಚಿಕಿತ್ಸೆಯನ್ನು ನೀಡಬೇಕು ಹಾಗೂ ಇದರ ಬಗ್ಗೆ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಅತಿಯಾದ ಕೆಲಸದ ಒತ್ತಡ, ಹೊಸ ಕೆಲಸ, ಕೆಲಸ ಮಾಡುವ ಸ್ಥಳದಲ್ಲಿ ಮಾನ್ಯತೆ ಸಿಗದಿರುವುದು ಈ ಎಲ್ಲಾ ಕಾರಣಗಳು ಒಬ್ಬ ವ್ಯಕ್ತಿಯು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಸಾಮಾಜಿಕ ಜಾಲತಾಣದ ಬಳಕೆಯ ಚಟಕ್ಕೆ ಬೀಳುತ್ತಾರೆ. ಮಾನಸಿಕ ಕಿನ್ನತೆ, ಆತಂಕದಿಂದ ಆತ್ಮ ಹತ್ಯೆಗೆ ಗುರಿಯಾಗುತ್ತಾರೆ ಅವುಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಕಡಿವಾಣ ಹಾಕಬೇಕು ಎಂದು ಹೇಳಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ “ಟೆಲಿ ಮನಸ್” 14416 ಟೋಲ್ ಫ್ರೀ ನಂಬರ್ ಅನ್ನು ನೀಡಲಾಗಿದ್ದು, ಇದನ್ನು ನೇರವಾಗಿ ನಿಮಾನ್ಸ್ ಗೆ ಕನೆಕ್ಟ್ ಆಗಿರುತ್ತದೆ. ಇದರಿಂದ ಮನೆಯಲ್ಲಿಯೇ ಕುಳಿತು ಚಿಕಿತ್ಸೆ ಪಡೆಯಬಹುದಾಗಿದೆ. ಅದಲ್ಲದೆ ಸರ್ಕಾರದ ವತಿಯಿಂದ ಪ್ರತಿ ಮಂಗಳವಾರ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಮನೋ ಚೈತನ್ಯ ಲೀಗ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇಲ್ಲಿ ಸಾರ್ವಜನಿಕರು ಮನೋ ರೋಗಕ್ಕೆ ಸಂಬಂಧ ಪಟ್ಟಂತೆ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಪ್ರತಿ ಮಂಗಳವಾರ ಶನಿವಾರ ಮಾನಸಿಕ ಆರೋಗ್ಯದ ಸೈಕ್ಯಾಟ್ರಿಸ್ಟ್ ಕೌನ್ಸಿಲರ್ ಮತ್ತು ಸ್ಟಾಫ್ ನರ್ಸ್ಗಳನ್ನು ಒಳಗೊಂಡಿರುವ ಟೀಮ್ ಅನ್ನು ಎಲ್ಲ ತಾಲೂಕು ಆಸ್ಪತ್ರೆಗಳು ಒಳಗೊಂಡಿದ್ದು, ಸಾರ್ವಜನಿಕರು ತೆರಳಿ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಪಂಚದಾದ್ಯಂತ ಸುಮಾರು 980 ಮಿಲಿಯನ್ ಮಾನಸಿಕ ಆರೋಗ್ಯಕ್ಕೆ ಒಳಗಾಗಿದ್ದು, ಇದರಲ್ಲಿ 8 ಜನರಲ್ಲಿ ಒಬ್ಬರು ಮಾನಸಿಕ ಕಾಯಿಲೆಗೆ ಒಳಗಾಗುತ್ತಾರೆ. ಇದರಲ್ಲಿ ಭಾರತ 61 ನೇ ಸ್ಥಾನದಲ್ಲಿದ್ದು, ಮಿಲಿಯನ್ ಜನರು ಮಾನಸಿಕ ಆರೋಗ್ಯದ ವಿವಿಧ ಹಂತಕ್ಕೆ ಒಳಗಾಗಿದ್ದಾರೆ. ಪ್ರಪಂಚದಲ್ಲಿ ಮಾನಸಿಕ ಆರೋಗ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ಮಾರ್ಪಡಿಸುವ ಹಾಗೂ ಅವರಲ್ಲಿ ಅರಿವು ಮೂಡಿಸಲು ನಮ್ಮ ಸಮುದಾಯದ ಪಾತ್ರ ಮಹತ್ವವಾಗಿದ್ದು, ಈ ಒಳ್ಳೆಯ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಪ್ರಭುಸ್ವಾಮಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒಬ್ಬ ವ್ಯಕ್ತಿಗೆ ಮಾನಸಿಕ ಒತ್ತಡ ಎಂಬುದು ಒಂದು ರೀತಿಯ ಕಾಯಿಲೆ ಇದ್ದಂತೆ. ಕರ್ತವ್ಯ ನಿರತ ಅಧಿಕಾರಿಗಳಿಗೆ ಈ ರೀತಿಯ ಮಾನಸಿಕ ಒತ್ತಡ ನಿರ್ಹಹಣಾ ಕಾರ್ಯಗಾರದ ಅವಶ್ಯಕತೆ ಇದೆ ಎಂದರು.
ಪ್ರತಿಯೊಬ್ಬರಿಗೂ ಪ್ರತಿಯೊಂದು ಕೆಲಸ ಮಾಡುವಾಗಲೂ ಕೆಲಸದ ಒತ್ತಡ ಇದ್ದೆ ಇರುತ್ತದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲಮಾನದಲ್ಲಿ ಭಾರತದಲ್ಲಿ ನೀರಿಕ್ಷಿತಾ ಜೀವಿತಾವಧಿ, ಜನನ ದರ, ಮರಣ ದರಗಳ ಹೋಲಿಕೆ ಮಾಡಿದಲ್ಲಿ ಪ್ರಸ್ತುತ ದಿನಗಳಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೇವೆ. ಭಾರತದಲ್ಲಿ 1941- 1947 ರ ಅವಧಿಯಲ್ಲಿ ಸರಾಸರಿ ಜೀವಿತಾವಧಿ 32 ವರ್ಷವಿತ್ತು ಇಂದು 70 ವರ್ಷಆಗಿದೆ. ಇದು ಉತ್ತಮ ರೀತಿಯ ಧನಾತ್ಮಕ ಬೆಳವಣಿಗೆಯಾಗಿದೆ ಎಂದರು.
ಇಂದು ಆರೋಗ್ಯ ಕ್ಷೇತ್ರದಲ್ಲಿ ಅನೇಕ ತಂತ್ರಜ್ಞಾನ, ಆವಿಷ್ಕಾರ ಸುಧಾರಣೆಗಳು ನಡೆಯುತ್ತಿವೆ. ಆದರೇ ಉತ್ತಮ ಆರೋಗ್ಯಕ್ಕೆ ನಗುವೇ ಔಷಧ, ಇದನ್ನು ಸದಾ ನಮ್ಮ ಮುಖದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ಆದ್ದರಿಂದ ಯಾವುದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಕೃಷ್ಣಂ ರಾಜು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.