ಮನೆ ರಾಜ್ಯ ಟಿಬಿ ಡ್ಯಾಂಗೆ ಕ್ರಸ್ಟ್‌ಗೇಟ್‌ ಅಳವಡಿಕೆ ನಡೆಯೋದು ಅನುಮಾನ..!

ಟಿಬಿ ಡ್ಯಾಂಗೆ ಕ್ರಸ್ಟ್‌ಗೇಟ್‌ ಅಳವಡಿಕೆ ನಡೆಯೋದು ಅನುಮಾನ..!

0

ಬಳ್ಳಾರಿ : ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆ ಈ ಬೇಸಿಗೆಯಲ್ಲಿ ನಡೆಯುವುದು ಅನುಮಾನ ಎಂಬ ಮಾತು ಕೇಳಿ ಬಂದಿದೆ. 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಬಳಿಕ ಜಲಾಶಯದ ಎಲ್ಲಾ ಗೇಟ್‌ಗಳನ್ನು ಕೂಡಲೇ ಬದಲಾಯಿಸಬೇಕುಎಂದು ತಜ್ಞರು ವರದಿ ನೀಡಿದ್ದರು. ವರದಿ ಕೊಟ್ಟು ವರ್ಷ ಕಳೆದರೂ ಇದುವರೆಗೂ ಗೇಟ್ ಬದಲಾಯಿಸಲು ಸಾಧ್ಯವಾಗಿಲ್ಲ. 32 ಗೇಟ್ ಪೈಕಿ ಇಲ್ಲಿಯವರೆಗೆ ಕೇವಲ 16 ಗೇಟ್ ಮಾತ್ರ ತಯಾರಾಗಿದ್ದು, ಗೇಟ್ ಸಿದ್ದತೆ ಕಾರ್ಯ ಸಾಕಷ್ಟು ವಿಳಂಬವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 8 ಜಿಲ್ಲೆಗಳ ಜೀವನಾಡಿ ಈ ತುಂಗಭದ್ರಾ ಜಲಾಶಯ. ಇದೇ ಜಲಾಶಯದ ನೀರಿನಿಂದ 16 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಇದೀಗ ಆ ಎಲ್ಲಾ ರೈತರು ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದಾರೆ. ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಒಂದು ವರ್ಷ 6 ತಿಂಗಳಾಗಿದ್ರೂ ಅದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಹೊಸ ಗೇಟ್‌ಗಳನ್ನು ತಯಾರಿಸಲು ಗುಜರಾತ್ ಮೂಲದ ಅಹಮದಬಾದ್‌ನ ಹಾರ್ಡ್‌ವೇರ್‌ ಟೂಲ್ಸ್ ಆಂಡ್ ಮಷಿನರಿ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಟೆಂಡರ್ ಹಂಚಿಕೆ ಮಾಡಲಾಗಿತ್ತು. 32 ಗೇಟುಗಳ ಬದಲಾವಣೆ ಮಾಡಲು ಒಟ್ಟು 53 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಬಿಡ್ ಮಾಡಿದ ಕಂಪನಿ ಕಡಿಮೆ ಬೆಲೆಗೆ ಟೆಂಡರ್ ಹಾಕಿದ್ದರಿಂದ ಯೋಜನಾ ಮೊತ್ತ 36 ಕೋಟಿ ರೂ.ಗೆ ತಗ್ಗಿದೆ. ಇಲ್ಲಿಯವರೆಗೆ 16 ಗೇಟುಗಳು ಮಾತ್ರ ತಯಾರಾಗಿರುವ ಕಾರಣ ಮುಂದಿನ ವರ್ಷವೂ ಎರಡನೇ ಬೆಳೆಗೆ ನೀರು ಸಿಗುತ್ತಾ? ಸಿಗುವುದಿಲ್ಲವೋ ಎಂಬ ಆತಂಕದಲ್ಲಿ ತುಂಗಭದ್ರಾ ಜಲಾನಯನ ಪ್ರದೇಶದ ರೈತರಿದ್ದಾರೆ.

ಜಲಾಶಯದಲ್ಲಿ 70 ಟಿಎಂಸಿ ನೀರಿದೆ. ಕ್ರಸ್ಟ್ ಗೇಟ್ ಅಳವಡಿಸುವ ಸಮಯದಲ್ಲಿ 40 ಟಿಎಂಸಿ ನೀರು ಜಲಾಶಯದಲ್ಲಿರಬೇಕು. ಕ್ರಸ್ಟ್ ಗೇಟ್ ಕೆಲಸ ಆರಂಭಿಸಬೇಕಾದರೆ ಇನ್ನೂ 30 ಟಿಎಂಸಿ ನೀರು ಖಾಲಿ ಮಾಡಬೇಕು. 30 ಟಿಎಂಸಿ ನೀರು ಖಾಲಿ ಮಾಡಿದ ಬಳಿಕವಾದ್ರೂ ಕ್ರಸ್ಟ್ ಗೇಟ್ ಕೂಡಿಸಲು ಸಾಧ್ಯವೇ ಎನ್ನುವುದು ಇದೀಗ ಯಕ್ಷಪ್ರಶ್ನೆಯಾಗಿದೆ. ಇನ್ನೂ 6 ತಿಂಗಳಲ್ಲಿ 16 ಕ್ರಸ್ಟ್ ಗೇಟ್ ತಯಾರಿಸೋದು ಸಾಧ್ಯವೇ ಇಲ್ಲ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೂ ಇದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.