ರಾಮನಗರ: ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ ರೀತಿ, ರಾಜಕೀಯ ಪಥ ಬದಲಾವಣೆಯಾಗಲಿದೆ ಎಂದರು.
ಪ್ರಸಕ್ತ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕರ ನಡೆಯೇ ಇದಕ್ಕೆ ಕಾರಣ. 2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆಯಿದೆ. ಕಾಂಗ್ರೆಸ್ ನ ಅಸಮಾಧಾನಿತ ಶಾಸಕರು ವಿಮುಖವಾಗಿ ಯೋಚನೆ ಮಾಡುತ್ತಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದಾರೆ. ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲಾಗುತ್ತಿಲ್ಲ ಎಂದರು.
ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ ಹಾಗಾಗಿ ಅನುದಾನ ಕೊಡಲ್ಲವೆಂದು ಹೇಳಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ರಾಜಕೀಯ ಭವಿಷ್ಯದ ಆತಂಕವಿದೆ. ಹಾಗಾಗಿ ಇದರ ಪರಿಣಾಮವನ್ನು ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡುತ್ತೀರಿ ಎಂದರು.
ನಾವು ಯಾವುದೇ ರೀತಿಯ ಆಪರೇಷನ್ ಮಾಡುತ್ತಿಲ್ಲ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ. ಡಿಕೆ ಶಿವಕುಮಾರ್ ರೀತಿ ಆಪರೇಷನ್ ಹಸ್ತದ ಕೆಲಸವನ್ನೂ ನಾವು ಮಾಡಲ್ಲ. ಸದ್ಯ ನನಗಿರುವ ಮಾಹಿತಿ ಪ್ರಕಾರ ಹೇಳಿದ್ದೇನೆ. ಖಾಸಗಿಯಾಗಿ ಸಿಕ್ಕಾಗ ಕೆಲವರು ನೋವನ್ನ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರೆ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಸಿ.ಪಿ.ಯೋಗೇಶ್ವರ್ ರಾಜಕೀಯ ಭವಿಷ್ಯ ನುಡಿದರು.