ಮನೆ ರಾಜ್ಯ ಅರ್ಹ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬರುವುದು ಶ್ಲಾಘನೀಯ: ಸಭಾಪತಿ ಬಸವರಾಜ ಹೊರಟ್ಟಿ

ಅರ್ಹ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬರುವುದು ಶ್ಲಾಘನೀಯ: ಸಭಾಪತಿ ಬಸವರಾಜ ಹೊರಟ್ಟಿ

ಕೆಯುಡಬ್ಲ್ಯೂಜೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮ

0

ಬೆಂಗಳೂರು: ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ದತೆ ಕಾಪಾಡಿಕೊಳ್ಳಬೇಕು. ಈ ಬಾರಿ  ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ವಿಧಾನಪರಿಷತ್ ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ  ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಪತ್ರಕರ್ತರು ದಿಟ್ಟತನದಿಂದ ಕಾರ್ಯ ನಿರ್ವಹಿಸಬೇಕಾದುದು ಅತ್ಯಗತ್ಯ. ಹಾಗಾಗಿ ಸಮರ್ಥರಿಗೆ ಮನ್ನಣೆ ನೀಡಬೇಕಾದುದು ಎಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ನಾನು ಸದನಕ್ಕೆ ಬಂದ ಹೊಸದರಲ್ಲಿ ಏನೇನು ತಪ್ಪು ಮಾಡಿದೆ ಎನ್ನುವುದನ್ನು ಹಿರಿಯ ಪತ್ರಕರ್ತರೇ ತಿದ್ದಿ ಹೇಳುತ್ತಿದ್ದರು. ಹಾಗಾಗಿ ಬಹಳ ಕಲಿಯಲು ಸಾಧ್ಯವಾಯಿತು. ವೃತ್ತಿಪರವಾಗಿ ಅಷ್ಟು ಪ್ರಭುದ್ಧತೆ ಹೊಂದಿದ ಪತ್ರಕರ್ತರು ಇದ್ದರು. ಈಗ ಆ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ವೃತ್ತಿ ಭಾಂದವರ ಬಗ್ಗೆ ತೋರುತ್ತಿರುವ ಕಾಳಜಿಯು ನಿಜಕ್ಕೂ ಸ್ತುತ್ಯಾರ್ಹ. ನಿರಂತರ ಕಾರ್ಯಕ್ರಮ ಮೂಲಕ ಕೆಯುಡಬ್ಲ್ಯೂಜೆ ಹೊಸ ಹೆಜ್ಜೆ ಇಟ್ಟಿರುವುದು ವಿಶೇಷ ಎಂದು ಅಭಿನಂದಿಸಿದರು.

ಪತ್ರಿಕಾ ವಿತರಕರನ್ನೂ ಸರ್ಕಾರ ಈ ಬಾರಿ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಮತ್ತು ಆಸ್ಪತ್ರೆಗೆ ಸೇರಿದವರಿಗೆ ನೆರವು ನೀಡುವ ಯೋಜನೆ ಜಾರಿಗೆ ತರಲಾಗಿದೆ. ವಿತರಕರನ್ನು ಗುರುತಿಸುವ ಕಾರ್ಯವು ಇನ್ನೂ ಮುಂದುವರಿಯಲಿದೆ ಎಂದು ಅವರು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತರಾದ ಮಾಯಾ ಶರ್ಮಾ ಮಾತನಾಡಿ, ಪತ್ರಕರ್ತರು ಯಾವ ಪಕ್ಷಕ್ಕೂ ಮತ್ತು ಯಾವ ಪಂಥಕ್ಕೂ ಸೇರಿದವರಲ್ಲ. ಸದಾ ನಿಸ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ವೃತ್ತಿ ಬದ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಸುದ್ದಿಮನೆಯ ಹಿರಿಯ ಸುಬ್ಬು ಹೊಲೆಯಾರ್ ಮಾತನಾಡಿ, ವೃತ್ತಿಪರವಾದ ಕೆಯುಡಬ್ಲ್ಯೂಜೆ ಸಂಸ್ಥೆಯಲ್ಲಿ ನನಗೆ ಗೌರವಿಸುತ್ತಿರುವುದು ಅಭಿಮಾನದ ಸಂಗತಿ ಎಂದರು. ಡಾ.ಅಂಬೇಡ್ಕರ್ ಆಶಯಗಳು ಸಂವಿಧಾನಬದ್ದವಾಗಿ ಶೋಷಿತ ಸಮುದಾಯಗಳಿಗೆ ನಿಜ ಅರ್ಥದಲ್ಲಿ ತಲುಪಬೇಕು ಎಂದರು.

ಹಿರಿಯ ಪತ್ರಕರ್ತ ರಫೀಕ್ ಭಂಡಾರಿ, ಪತ್ರಿಕಾ ವಿತರಕರಾದ ಜವರಪ್ಪ ಮೈಸೂರುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸಭಾಪತಿಗಳ ವಿಶೇಷಾಧಿಕಾರಿ ಡಾ. ಮಹೇಶ್ ವಾಳ್ವೇಕರ್ , ವಿಧಾನಸಭಾಧ್ಯಕ್ಷರ ಮಾಧ್ಯಮ ಸಂಯೋಜಕರಾದ ಜ್ಞಾನಶೇಖರ್ ಅವರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘವು ಸದಾ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸದಾ ಬದ್ಧವಾಗಿ ಕೆಲಸ ಮಾಡುತ್ತದೆ. ವೃತ್ತಿ ಬಾಂಧವರನ್ನು ಕೆಯುಡಬ್ಲ್ಯೂಜೆ ಅಂಗಳದಲ್ಲಿ ಸನ್ಮಾನಿಸತ್ತಿರುವುದು ಅಭಿಮಾನದ ಸಂಗತಿ ಎಂದರು.

ಸಮಾರಂಭದಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಶೇಷಚಂದ್ರಿಕಾ, ಡಿ. ಉಮಾಪತಿ, ಪತ್ರಿಕಾ ವಿತರಕರಒಕ್ಕೂಟದ ಅಧ್ಯಕ್ಷ ಶಂಭುಲಿಂಗ, ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್, ಕೆ.ಆರ್.ದೇವರಾಜ್, ಕೋಲಾರದ ವಿ.ಮುನಿರಾಜು, ನಗರ ಘಟಕದ ಪದಾಧಿಕಾರಿಗಳು, ಹಿರಿಯ ಪತ್ರಕರ್ತೆ ಶಮಂತಾ, ಶಶಿಕಲಾ ಸೇರಿದಂತೆ ಹಿರಿಯ ಪತ್ರಕರ್ತರು ಮತ್ತು ಬೆಂಗಳೂರು ನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರೂ ಹಾಜಾರಿದ್ದರು.

ಸಂಘದ  ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು, ಕೊನೆಯಲ್ಲಿ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ  ವಂದಿಸಿದರು