ನೆಲಮಂಗಲ: ರಾಜ್ಯದಲ್ಲಿ ಜಾತಿಗಣತಿ ವರದಿ ಕುರಿತು ಈಗಲೇ ಚರ್ಚೆ ನಡೆಸುವುದು ಸಾಧುವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಶಿವಗಂಗೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಏಪ್ರಿಲ್ 17 ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಲಿದೆ. ತದನಂತರವಷ್ಟೇ ಅದರ ಸಾಧಕ ಬಾಧಕದ ಬಗ್ಗೆ ಚರ್ಚೆ ಮಾಡಿದರೆ ಸೂಕ್ತ. ವೀರಶೈವ ಲಿಂಗಾಯತರಲ್ಲಿ 103 ಉಪ ಪಂಗಡಗಳಿವೆ. ಅದರಲ್ಲಿ ಯಾವುದೇ ಪಂಗಡಗಳಿಗೂ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು. ಅನ್ಯ ಸಮುದಾಯಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗಾ ಕ್ಷೇತ್ರದ ಶ್ರೀ ಸದ್ಧರ್ಮ ಸಿಂಹಾಸನ ಸಂಸ್ಥಾನ ಹೊನ್ನಮ್ಮದೇವಿ ಗವಿಮಠದಲ್ಲಿ ಮಂಗಳವಾರ ನಡೆದ ಹೊನ್ನಮ್ಮದೇವಿ ದೇವಾಲಯದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಧರ್ಮಾದಾರಿತ ರಾಜಕಾರಣದಲ್ಲಿ ಬೆಳೆದು ಬಂದಿದ್ದು, ನಾಡಿನ ಮಠಾಧೀಶರ ಚಿಂತನೆಗಳನ್ನು, ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ. ಸರ್ಕಾರಕ್ಕೆ ದಿಕ್ಸೂಚಿ ಕೊಟ್ಟಿದ್ದು ನಾಡಿನ ಮಠ ಮಾನ್ಯಗಳು, ಸರ್ಕಾರಕ್ಕೆ ಅಕ್ಷರ ದಾಸೋಹ, ಅನ್ನದಾಸೋಹ ಪರಿಕಲ್ಪನೆ ನೀಡಿದ್ದು ನಾಡಿನ ಮಠಗಳು. ಈ ಕಾರ್ಯಗಳಿಂದ ಸರ್ಕಾರ ಪ್ರೇರಣೆಗೊಂಡು ತ್ರಿವಿಧ ದಾಸೋಹವನ್ನು ನಡೆಸಿಕೊಂಡು ಬರುತ್ತಿದೆ ಎಂದು ಸಚಿವರು ಹೇಳಿದರು.
ನಮಗೆ ಜಾತಿ ಧರ್ಮ ಗೊತ್ತಿಲ್ಲ. ನಮಗೆ ಗೊತ್ತಿರುವುದು ಎರಡೇ ಜಾತಿ, ಒಂದು ಹೆಣ್ಣು ಮತ್ತೊಂದು ಗಂಡು ಜಾತಿ. 12ನೇ ಶತಮಾನದಲ್ಲೆ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.