ಮೈಸೂರು: ಜ್ಞಾನವನ್ನು ಸೃಷ್ಟಿಸುವುದರ ಜತೆಗೆ ಮನುಕುಲದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವ ವಿದ್ಯಾಲಯಗಳ ಸಂಘ ವತಿಯಿಂದ ಇಂದು ಆಯೋಜಿಸಲಾಗಿದ್ದ 96ನೇ ವಾರ್ಷಿಕ ಸಭೆ ಮತ್ತು “ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅರಿತುಕೊಳ್ಳುವುದು” ಕುರಿತ ಕುಲಪತಿಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ದಾರಿ ದೊರಕುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ ಎಂದರು.
ಸೂಕ್ತ ಅವಕಾಶಗಳು; ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರತವು ಸದೃಢವಾಗುವುದರ ಜತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಕೆಲಸವಾಗಬೇಕಿದೆ.ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ ಎಂದು ಹೇಳಿದರು.
ಈಗಾಗಲೇ ವಿಶ್ವ ವಿದ್ಯಾಲಯಗಳು ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಸರಕಾರದ ಆಶಯವಾಗಿದೆ ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಗೌರವಾನ್ವಿತ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ವರ್ಚುವಲ್ ಮೂಲಕ ಸಮ್ಮೇಳನ್ನುದ್ದೇಶಿಸಿ ಮಾತನಾಡಿದರು.
ಭಾರತೀಯ ವಿಶ್ವ ವಿದ್ಯಾಲಯಗಳ ಸಂಘದ ಅಧ್ಯಕ್ಷರಾದ ಕರ್ನಲ್ ಡಾ.ಜಿ.ತಿರುವಾಸಗಂ, ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡಾ.ಪಂಕಜ್ ಮಿತಲ್, ಕುಲಸಚಿವ ಶಿವಪ್ಪ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.