ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಬೀಳಿಸಲಿದೆ ಇದು ಸತ್ಯ ಸಂಗತಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಾಕೆ ಸರ್ಕಾರ ಬೀಳಿಸಬಾರದು? ಅವರ ನಾಯಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯು ಸರ್ಕಾರ ಬೀಳಿಸುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಕೊರತೆ ಜಾಸ್ತಿ ಆಗಿದೆ. ಕಾಂಗ್ರೆಸ್ ಶಾಸಕರಿಗೆ ಈ ಸರ್ಕಾರ ಬೇಡವಾಗಿದೆ. ಅವರೇ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ರೇಡ್ ಸಂದರ್ಭದಲ್ಲಿ ಅಕ್ರಮ ಹಣ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಅವರು ಜೈಲಿಗೆ ಹೋಗಿದ್ದರು. ಡಿಕೆಶಿ ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದಿದ್ದಾರೆ. ಅದು ಬಹಿರಂಗವಾಗಿ ಹೇಳುವುದು ತಪ್ಪಾ? ಡಿಕೆಶಿ ಅಕ್ರಮ ಸಂಪಾದನೆ ಪ್ರಕರಣ ಸಿಬಿಐ ತನಿಖೆ ಮಾಡುತ್ತಿದೆ. ಬರೆದಿಟ್ಟುಕೊಳ್ಳಿ ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.
100 ಕೋಟಿ ಅಕ್ರಮ ಹಣ ಬೆಂಗಳೂರಿನಲ್ಲಿ ಮೊನ್ನೆ ಪತ್ತೆಯಾಗಿದೆ. ಅದರ ಕುರಿತು ತನಿಖೆ ಮಾಡಿ ಎಂದು ಕೇಳುವುದು ತಪ್ಪಾ? ನೀವು ಕಳ್ಳರು ಅಂತಾ ನಾವು ನೇರವಾಗಿ ಹೇಳಿಲ್ಲ. ಬಿಬಿಎಂಪಿಯಿಂದ ಹಣ ಬಿಡುಗಡೆಯಾಗಿತ್ತು. ಅದರ ಕಮಿಷನ್ ಹಣ ಪತ್ತೆಯಾಗಿದೆ. ಸಿಎಂ ಅವರೇ ಈ ಪ್ರಕರಣ ಸಿಬಿಐಗೆ ವಹಿಸಬೇಕಿತ್ತು ಎಂದರು.