ಹುಬ್ಬಳ್ಳಿ: ರಾಜ್ಯ ಬಿಜೆಪಿ ಬಗ್ಗೆ ಕೇಂದ್ರ ನಾಯಕರಿಗೆ ಬೇಸರ ಇರುವುದು ನಿಜ. ಯಾಕೆ ಬೇಸರ ಎಂದು ಕೇಳುತ್ತೇವೆ. ಕೇಂದ್ರದ ನಿಯಂತ್ರಣವಿಲ್ಲ ಎಂಬುವುದು ಸುಳ್ಳು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನಾಯಕರಿಗೆ ರಾಜ್ಯದ ನಾಯಕರು ಹೆದರುತ್ತಾರೆ ಎಂಬುವುದು ಸುಳ್ಳು. ರಾಜ್ಯದಲ್ಲಿ ಸಂಘಟಿತವಾಗಿರುವ ಪಕ್ಷವಾಗಿದೆ ನಮ್ಮದು ಎಂದರು.
ಪಕ್ಷದಲ್ಲಿ ಒಂದಿಬ್ಬರು ತಮ್ಮ ವೈಯಕ್ತಿಕ ಅಸಮಧಾನ ವ್ಯಕ್ತಪಡಿಸಿದರೆ ಶಿಸ್ತು ಇಲ್ಲವಂತಲ್ಲ. ಒಂದು ಕೋಟಿ ಸದಸ್ಯರಿರುವ ಪಕ್ಷದಲ್ಲಿ ಒಂದಿಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಕರೆದು ಮಾತನಾಡುತ್ತಾರೆ. ಎಲ್ಲವೂ ಸರಿಯಾಗುತ್ತದೆ. ಕೆಲವರ ವೈಯಕ್ತಿಕ ಹೇಳಿಕೆಗಳಿಗೆ ಪಕ್ಷವು ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಐಸಿಸ್ ನಂಟಿರುವ ಮೌಲ್ವಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ದಲಿತರು, ಹಿಂದುಳಿದವರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಸುಳ್ಳಿಗೆ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಇವರಿಗೆ ಕೊಡಬೇಕು. ಹಿಂದುಳಿದ, ದಲಿತರ ಬಗ್ಗೆ ಕಾಳಜಿಯಿದ್ದರೆ ಜಾತಿ ಗಣತಿ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆಯಾಗಬೇಕು ಎಂಬುವುದು ಪಕ್ಷದ ನಿಲುವಾಗಿದೆ ಎಂದರು.
ಬಿಜೆಪಿ ಒಂದು ಕುಟುಂಬವಿದ್ದಂತೆ. ಯಾವುದೋ ಕಾರಣಕ್ಕೆ ಜಗದೀಶ ಶೆಟ್ಟರ ಹೊರಹೋಗಿದ್ದಾರೆ. ಅವರೊಂದಿಗೆ ನಾನು ಮಾತನಾಡುತ್ತೇನೆ. ನನ್ನ ಆತ್ಮೀಯ ಸ್ನೇಹಿತರು ಅವರು. ನಾನು ಮಾತನಾಡುವೆ ಬಂದರೂ ಬರಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎನ್ನುತ್ತಿದ್ದಂತೆ ರಾಜ್ಯಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು, ಅವರಾಗಿ ಬಂದರೂ ಕರೆದುಕೊಳ್ಳುವುದಿಲ್ಲ ಎಂದರು.