ಹುಬ್ಬಳ್ಳಿ: ಬಿಜೆಪಿ ಸರಕಾರದಲ್ಲಿ 40 ಪರ್ಸಂಟೇಜ್ ಕಮಿಷನ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಭ್ರಷ್ಟಾಚಾರ ಇದ್ದದ್ದು ನಿಜ ಎಂದು ಜಗದೀಶ ಶೆಟ್ಟರ್ ತಿಳಿಸಿದರು.
ಮಾಧ್ಯಮ ಸಂವಹನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ಕಿಮ್ಸ್‌ನಲ್ಲಿ 30 ವೈದ್ಯರು ಹಾಗೂ ಹಾವೇರಿ ವೈದ್ಯಕೀಯ ಕಾಲೇಜಿಗೆ 70 ವೈದ್ಯರ ನೇಮಕಾತಿಗೆ ಸಂದರ್ಶನ ಮುಗಿದು ಒಂದು ವರ್ಷವಾದರೂ ನೇಮ ಕಾತಿ ಆದೇಶ ನೀಡಿರಲಿಲ್ಲ. ಈ ಕುರಿತು ಸದನದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ನೇರ ವಾಗಿ ಪ್ರಶ್ನಿಸಿದ್ದೆ. ಈ ಸಂದರ್ಭದಲ್ಲಿ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಪ್ರಸ್ತಾವಿಸಿದ್ದೆ. ಇದರಿಂದಾಗಿ ಕಿಮ್ಸ್ ನಲ್ಲಿ ಒಂದಿಷ್ಟು ವೈದ್ಯರ ನೇಮಕಾತಿ ಆದೇಶ ನೀಡಲಾಯಿತು. ಆದರೆ ಮುಖ್ಯಮಂತ್ರಿ ಪ್ರತಿನಿಧಿಸುವ ಜಿಲ್ಲೆಯಲ್ಲಿ ಕಾರ್ಯಗತಗೊಳ್ಳಲಿಲ್ಲ. ಈಶ್ವರಪ್ಪ ಅವರ ಮೇಲೆ ಪಕ್ಷ ಒತ್ತಡ ತಂದು ನನ್ನಂಥವರ ಬಗ್ಗೆ ಮಾತನಾಡಿಸಿದ್ದಾರೆ ಎಂದರು.