ಮನೆ ಕಾನೂನು ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ಐಟಿ ದಾಳಿ: 26 ಕೋಟಿ ಮೌಲ್ಯದ ನಗದು ವಶ

ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ಐಟಿ ದಾಳಿ: 26 ಕೋಟಿ ಮೌಲ್ಯದ ನಗದು ವಶ

0

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆ ಮೂಲದ ಆಭರಣ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸುಮಾರು 26 ಕೋಟಿ ರೂಪಾಯಿ ನಗದು ಮತ್ತು 90 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Our Whatsapp Group

ನಾಸಿಕ್ ಮೂಲದ ಆಭರಣ ಕಂಪೆನಿಯಾದ ಸುರಾನಾ ಜ್ಯುವೆಲರ್ಸ್‌ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಈ ವೇಳೆ ಕಂತೆ ಕಂತೆ ಹಣಗಳು ಪತ್ತೆಯಾಗಿವೆ ಅಲ್ಲದೆ ಈ ಹಣಗಳನ್ನು ಲೆಕ್ಕ ಹಾಕಲು ಅಧಿಕಾರಿಗಳಿಗೆ ಹದಿನಾಲ್ಕು ಗಂಟೆಗಳು ಬೇಕಾಯಿತು ಎಂದು ಹೇಳಲಾಗಿದೆ, ಸುರಾನಾ ಜ್ಯುವೆಲರ್ಸ್‌ ಕಂಪೆನಿ ಹಾಗೂ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು ಮೂವತ್ತು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದ ಕೋಟಿಗಟ್ಟಲೆ ಹಣಗಳನ್ನು ವಶಕ್ಕೆ ಪಡೆದುಕೊಂಡಿದೆ.

ಆಭರಣ ಮಳಿಗೆ ಮಾಲೀಕರ ಬಳಿ ಇಷ್ಟೊಂದು ಮೊತ್ತದ ಹಣ ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ಕೆಲ ದಿನಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಮಹಾರಾಷ್ಟ್ರದಲ್ಲೇ ಬೀಡು ಬಿಟ್ಟಿದ್ದು ಹಲವು ಉದ್ಯಮಿಗಳ ಕಂಪೆನಿ, ನಿವಾಸಗಳ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಇತ್ತೀಚಿಗೆ ನಾಂದೇಡ್‌ ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 170 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದಾದ ಬಳಿಕ ಇದೀಗ ನಾಸಿಕ್ ನಲ್ಲಿರುವ ಆಭರಣ ಮಳಿಗೆಯ ಮಾಲೀಕರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಹಣ ಹಾಗೂ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ.