ಬೆಂಗಳೂರು(Bengaluru): ಬೆಂಗಳೂರು ಹಾಗೂ ಹೈದರಬಾದ್ ನಲ್ಲಿರುವ ಎರಡು ಹೆಸರಾಂತ ರಿಯಲ್ ಎಸ್ಟೇಟ್ ಕಂಪನಿಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, 22 ಕೋಟಿ ರೂ. ನಗದು ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸೇರಿದ 40 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ರಿಯಲ್ ಎಸ್ಟೇಟ್ನಲ್ಲಿನ ಘಟಕಗಳ ಮಾರಾಟದಿಂದ ಬಂದಿರುವ ಆದಾಯಕ್ಕೆ ಸಂಬಂಧಿಸಿದಂತೆ 90 ಕೋಟಿ ರೂಪಾಯಿಗಳ ಆದಾಯವನ್ನು ಬಚ್ಚಿಡಲಾಗಿದೆ. ಇದುವರೆಗೆ ನಡೆದ ಶೋಧ ಕಾರ್ಯದಲ್ಲಿ 3.50 ಕೋಟಿ ರೂಪಾಯಿ ಅಘೋಷಿತ ನಗದು ಹಾಗೂ 18.50 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.
ವಶಪಡಿಸಿಕೊಂಡ ಸಾಕ್ಷ್ಯಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕೆಲ ಭೂ ಮಾಲೀಕರು ಬೆಂಗಳೂರು ಮೂಲದ ಡೆವಲಪರ್ ಕಂಪನಿಯೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದವನ್ನು (ಜೆಡಿಎ) ಮಾಡಿಕೊಂಡಿರುವುದಾಗಿ ಕಂಡು ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ಡೆವಲಪರ್ಗೆ ನೀಡಿದ ಭೂಮಿಗೆ ಬದಲಾಗಿ ಭೂಮಾಲೀಕರು ಡೆವಲಪರ್ಗಳಿಂದ ಸೂಪರ್ ಬಿಲ್ಟ್-ಅಪ್ ಪ್ರದೇಶವನ್ನು ಪಡೆದುಕೊಂಡಿದ್ದಾರೆ. ಆದರೆ ಈ ಯೋಜನೆಗಳು ಪೂರ್ಣಗೊಂಡು ಪ್ರಮಾಣಪತ್ರಗಳನ್ನು ಪಡೆದಿದ್ದರೂ, ಭೂ ಮಾಲೀಕರು ಈ ವಹಿವಾಟಿನಿಂದ ಗಳಿಸಿದ ಕ್ಯಾಪಿಟಲ್ ಗೇನ್ಸ್ (ಬಂಡವಾಳ ಲಾಭ) ಅನ್ನು ಸರ್ಕಾರಕ್ಕೆ ತಿಳಿಸಿಲ್ಲ ಎಂದು ಇಲಾಖೆ ಹೇಳಿದೆ.
ಹೀಗೆ ಬಹಿರಂಗಪಡಿಸದ ಬಂಡವಾಳ ಲಾಭದ ಮೊತ್ತವು 400 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.