ಚಿಕ್ಕಮಗಳೂರು : ಡಿಸಿಎಂ ಡಿಕೆ ಶಿವಕುಮಾರ್ ದೇವರ ಜೊತೆ ಮಾತನಾಡಿದ್ದಾರಂತಲ್ಲ. 45 ದಿನ ಕಾದು ನೋಡೋಣ ಏನಾಗುತ್ತೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಾಳೆಹೊನ್ನೂರಿನ ಸೀಗೋಡು ಗ್ರಾಮದಲ್ಲಿ ನಡೆದ ಕಾಫಿ ಸಂಶೋಧನಾ ಕೇಂದ್ರದ 100ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ವೇಳೆ, ಮುಂದಿನ ಮೂರು ಬಜೆಟ್ಗಳನ್ನು ತಾನೇ ಮಂಡಿಸುವುದಾಗಿ ಸಿಎಂ ಹೇಳುತ್ತಿದ್ದಾರೆ. ಸದ್ಯಕ್ಕೆ ಅವರೇ ಅಧಿಕಾರದಲ್ಲಿ ಇರುವುದರಿಂದ ಅದನ್ನು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಸದನದ ಕಲಾಪಗಳ ವಿಚಾರವಾಗಿ, ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೆ ಹತ್ತಾರು ಬಿಲ್ಗಳನ್ನು ಚರ್ಚೆಯಿಲ್ಲದೆಯೇ ಅಂಗೀಕರಿಸಲಾಗಿದೆ ಎಂದು ದೂರಿದರು. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಈಗಲೇ ಹೆಚ್ಚೇನೂ ಮಾತನಾಡುವುದಿಲ್ಲ. ಸೂಕ್ತ ಸಮಯ ಬಂದಾಗ ಎಲ್ಲವನ್ನೂ ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ. ಅದಕ್ಕೆ ಕಾಲ ಕೂಡಿ ಬರಬೇಕು ಎಂದರು.
ರಾಜ್ಯದಲ್ಲಿ ದಿನಬೆಳಗಾದರೆ ನಡೆಯುತ್ತಿರುವ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆಗಳು ಜನರಿಗೆ ಮನೋರಂಜನೆ ನೀಡಲು ಮುನ್ನೆಲೆಗೆ ತರುತ್ತಿದ್ದಾರೆ. ಯಾರು ಸಿಎಂ ಆಗುತ್ತಾರೋ ಬಿಡುತ್ತಾರೋ ನಮಗೆ ಅದರ ಆಸಕ್ತಿ ಇಲ್ಲ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೃಷಿಕರ ಪರಿಸ್ಥಿತಿ ಅದೋಗತಿಗೆ ತಲುಪಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ನಾಡಿನ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ. ರಸ್ತೆಗಳ ಸ್ಥಿತಿಯನ್ನು ನೋಡಿದರೆ ರಾಜ್ಯದ ಅಭಿವೃದ್ಧಿ ಎಂತಹುದು ಎಂಬುದು ತಿಳಿಯುತ್ತದೆ.
ಮೈಸೂರಿನಿಂದ ಕೆ.ಆರ್.ಪೇಟೆಯಂತಹ ಅರ್ಧ ಗಂಟೆಯ ಹಾದಿಗೂ ಹೆಲಿಕಾಪ್ಟರ್ ಬಳಸುವ ಮುಖ್ಯಮಂತ್ರಿಗಳು ಅದರ ಓಡಾಟಕ್ಕಾಗಿ ಬರೋಬ್ಬರಿ 47 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ದಾಖಲೆಯ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುವವರು ಜನರ ಮೇಲೆ ಎಷ್ಟು ತೆರಿಗೆ ಹಾಕಬೇಕು ಎಂಬುದರ ಬಗ್ಗೆಯೇ ಚಿಂತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಮೆರಿಕದ ಅಧ್ಯಕ್ಷ ಟ್ರಂಪ್ ಪ್ರಪಂಚಕ್ಕೆ ಏನೋ ಮಾಡಲು ಹೊರಟು ಒದ್ದಾಡುತ್ತಿದ್ದಾರೆ. ಇಲ್ಲಿ ಕುರ್ಚಿ ಕದನ ಮಾಡುತ್ತಿರುವವರು ಅಲ್ಲಿಗೆ ಹೋಗಿ ಅವರಿಗೆ ಸಹಕಾರ ನೀಡಿದರೆ ಒಳ್ಳೆಯದು ಎಂದು ಲೇವಡಿ ಮಾಡಿದರು.














