ಹುಬ್ಬಳ್ಳಿ: ಬಿಜೆಪಿಯಿಂದ ಬಂಡಾಯ ಎದ್ದವರು ಯಾರೂ ಗೆದ್ದಿಲ್ಲ. ಜಗದೀಶ್ ಶೆಟ್ಟರ್ ಅವರ ಭವಿಷ್ಯ ಮೇ 13 ನಂತರ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರಿಗೆ ಪಕ್ಷ ಹಲವು ಸ್ಥಾನಗಳನ್ನು ನೀಡಿದ್ದರೂ ಪಕ್ಷ ಬಿಟ್ಟಿದ್ದಾರೆ. ಈಗಲೂ ಉನ್ನತ ಸ್ಥಾನ ನೀಡುವ ಭರವಸೆ ನೀಡಿದರೂ ತಿರಸ್ಕರಿಸಿ ಹೊರ ಹೋಗಿದ್ದಾರೆ. ಅವರಿಗೆ ಟಿಕೆಟ್ ನಿರಾಕರಿಸಿದ್ದು ಕೇಂದ್ರ ಸಂಸದೀಯ ಮಂಡಳಿ ಅವರು ಹಿಂದೆ ಕಾರ್ಯಕಾರಣಿ ಸಮಿತಿಯಲ್ಲಿದ್ದರೂ ಎಲ್ಲರಿಗೂ ಟಿಕೆಟ್ ನೀಡಿದ್ದಾರೆಯೇ ಹಾಗಾದರೆ ಕುಂದಗೋಳದ ಚಿಕ್ಕನಗೌಡರಿಗೆ ಯಾಕೆ ತಪ್ಪಿಸಿದರು ಎಂದು ಪ್ರಶ್ನಿಸಿದರು.
ರಾಜ್ಯದ 224 ಕ್ಷೇತ್ರಗಳು ಬಿಜೆಪಿಗೆ ಸವಾಲು ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ ವಿನಃ ಬಿಜೆಪಿ ದುರ್ಬಲವಾಗಿಲ್ಲ ಎಂದರು.
ಹುಬ್ಬಳ್ಳಿ ಈ ಭಾಗದ ಪ್ರಮುಖ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಹಲವು ನಾಯಕರು ಈ ಭಾಗಕ್ಕೆ ಬರುತ್ತಿದ್ದಾರೆ ವಿನಃ ಹು-ಧಾ ಕೇಂದ್ರ ಕ್ಷೇತ್ರದ ಬಗ್ಗೆ ಅಷ್ಟೊಂದು ಒತ್ತು ನೀಡಿಲ್ಲ. ಈ ಕ್ಷೇತ್ರಕ್ಕೆ ನೀಡಿದಷ್ಟು ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ನೀಡಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ಬಿ.ಎಲ್. ಸಂತೋಷ ಸೇರಿದಂತೆ ಪ್ರಮುಖ ಸ್ಥಾನದಲ್ಲಿದ್ದವರ ಮೇಲೆ ಆರೋಪಗಳು ಸಾಮನ್ಯ. ಇದೀಗ ಶೆಟ್ಟರ ಪಕ್ಷ ಬಿಟ್ಟು ಹೊರ ಹೋಗಿದ್ದಾರೆ ಹೀಗಾಗಿ ಅವರು ಮಾತನಾಡುತ್ತಿದ್ದಾರೆ ಎಂದರು.
ಈಶ್ವರಪ್ಪ ಹಾಗೂ ಕೆಲ ನಾಯಕರಿಗೆ ಟಿಕೆಟ್ ತಪ್ಪಲಿದೆ ಎನ್ನುವ ತಮ್ಮ ಆಡಿಯೋ ವೈರಲ್ ಆಗಿರುವ ಬಗ್ಗೆ ಮಾತನಾಡಿದ ಅವರು, ಅದು ನ್ಯಾಯಾಲಯದಲ್ಲಿದೆ ಈ ಬಗ್ಗೆ ಮಾತನಾಡುವುದಿಲ್ಲ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಜಾರಿಕೊಂಡರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದೆ. ಆ ಪಕ್ಷ ಒಂದು ಜಿಲ್ಲೆಗೆ ಸೀಮಿತವಾಗಲಿದೆ. ಕಾಂಗ್ರೆಸ್ 80 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆಯಷ್ಟೆ. ಹೊಸಬರಿಗೆ ಅವಕಾಶ, ಹಿರಿಯರನ್ನು ಕೈ ಬಿಡುವ ಹೊಸ ಪ್ರಯೋಗ ಲೋಕಸಭಾ ಚುನಾವಣೆಗೆ ಅನ್ವಯವಾಗುತ್ತಾ ಎನ್ನುವ ಪ್ರಶ್ನೆಗೆ ಮುಂದೆ ಕಾದು ನೋಡಿ ಎಂದು ಪ್ರತಿಕ್ರಿಯೆ ನೀಡಿದರು.