ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಏಪ್ರಿಲ್ 16ರಂದು ಪೂರ್ವಾನುಮತಿಯಿಲ್ಲದೆ ನಡೆದ ಹನುಮಾನ್ ಜಯಂತಿ ಮೆರವಣಿಗೆಯನ್ನು ತಡೆಯಲು ವಿಫಲರಾಗಿರುವ ಬಗ್ಗೆ ದೆಹಲಿಯ ನ್ಯಾಯಾಲಯವೊಂದು ಇತ್ತೀಚೆಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. [ಸರ್ಕಾರ ಮತ್ತು ಇಮ್ತಿಯಾಜ್ ಇನ್ನಿತರರ ನಡುವಣ ಪ್ರಕರಣ].
ಜಹಾಂಗೀರ್‌ಪುರಿ ಘರ್ಷಣೆಗೆ ಸಂಬಂಧಿಸಿದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಮಂದಿಗೆ ಜಾಮೀನು ನಿರಾಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗಗನ್‌ದೀಪ್ ಸಿಂಗ್, ಪೊಲೀಸರಿಂದ ಯಾವುದೇ ತೊಡಕುಗಳಿದ್ದರೆ ಅದನ್ನೂ ತನಿಖೆ ಮಾಡುವ ಅಗತ್ಯವಿದೆ ಎಂದರು.
“ಯಾವುದೇ ಅನುಮತಿ ಇಲ್ಲದೆ ನಡೆದ ಮೆರವಣಿಗೆ ತಡೆಯುವಲ್ಲಿ ಸ್ಥಳೀಯ ಪೊಲೀಸರ ಸಂಪೂರ್ಣ ವೈಫಲ್ಯವನ್ನು ಮೇಲ್ನೋಟಕ್ಕೆ ಇದು ಬಿಂಬಿಸುತ್ತದೆ. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಸರಳವಾಗಿ ತಳ್ಳಿಹಾಕಿದಂತಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ಸುಮ್ಮನಿರದೆ ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಬೇಕು. ಅವರಿಂದ ಯಾವುದಾದರೂ ತೊಡಕುಗಳಿದ್ದರೆ, ಅದರ ಬಗ್ಗೆಯೂ ತನಿಖೆ ನಡೆಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳಾದ ಇಮ್ತಿಯಾಜ್, ನೂರ್ ಆಲಂ, ಶೇಖ್ ಹಮೀದ್, ಅಹ್ಮದ್ ಅಲಿ, ಶೇಖ್ ಹಮೀದ್, ಎಸ್ ಕೆ ಸಹಾಹದಾ, ಶೇಖ್ ಜಾಕಿರ್ ಹಾಗೂ ಅಹಿರ್ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ “ಇವರನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಭೀತಿ ಇದೆ” ಎಂಬ ವಾದವನ್ನು ಗಣನೆಗೆ ತೆಗೆದುಕೊಂಡಿದೆ.
ಆದೇಶದ ಪ್ರಮುಖಾಂಶಗಳು
- ಯಾವುದೇ ಅಹಿತಕರ ಘಟನೆ ತಡೆಗಟ್ಟುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಆಡಳಿತದ ಪಾತ್ರ ಅಥವಾ ಅವುಗಳಿಗಿರುವ ತೊಡಕನ್ನು ಗಮನಿಸಬೇಕಿದೆ.
- ಮೆರವಣಿಗೆಗೆ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಮೆರವಣಿಗೆ ನಡೆದಿದೆ ಎಬುದನ್ನು ಸರ್ಕಾರ ನ್ಯಾಯಯುತವಾಗಿ ಒಪ್ಪಿಕೊಂಡಿದೆ.
- ಮೆರವಣಿಗೆ ತಡೆಯುವ ಬದಲು ಪೊಲೀಸರು ಅದರೊಂದಿಗೆ ಸಾಗಿದ್ದಾರೆ.