ಮನೆ ರಾಜಕೀಯ ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕರಿಗೆ ಜೈಲು ನಿಶ್ಚಿತ: ಸಿಎಂ ಬೊಮ್ಮಾಯಿ

ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕರಿಗೆ ಜೈಲು ನಿಶ್ಚಿತ: ಸಿಎಂ ಬೊಮ್ಮಾಯಿ

0

ಪಾಂಡವಪುರ(Pandavapura): ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕರು ಜೈಲಿಗೆ ಹೋಗುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ‘ಜನ ಸಂಕಲ್ಪ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ಅವರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಜೈಲು ಶಾಶ್ವತವಾದ ನೆಲೆಯಾಗಲಿದೆ. ದೇಶದ ವಿರುದ್ಧವಾಗಿ ಮಾತನಾಡುವವರಿಗೆ ಕಾನೂನು ವ್ಯವಸ್ಥೆ ತಕ್ಕ ಪಾಠ ಕಲಿಸಲಿದೆ  ಎಂದು ಹೇಳಿದರು.

‘ಕುಕ್ಕರ್‌ ಬಾಂಬ್‌ ಸ್ಫೋಟಿಸಲು ಹೊರಟಿದ್ದ ಭಯೋತ್ಪಾದನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅನುಕಂಪ ವ್ಯಕ್ತಪಡಿಸುತ್ತಾರೆ. ಆತ ಭಯೋತ್ಪಾದಕ ಆಗಿರದಿದ್ದರೆ ಎನ್‌ಐಎ ಹೇಗೆ ತನಿಖೆ ನಡೆಸುತ್ತಿತ್ತು. ಸರ್ಕಾರ ನಡೆಸಿದವರಿಗೆ ಇಷ್ಟೂ ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ತಮ್ಮ ನಿಲುವು ಸ್ಪಷ್ಪಪಡಿಸಬೇಕು. ದೇಶದ ಪರವಾಗಿದ್ದಾರೋ, ಭಯೋತ್ಪಾದಕರ ಪರವಾಗಿದ್ದಾರೋ ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು.

ಹಿಂದೆ ಕಾಂಗ್ರೆಸ್‌ ಮಾಡಿದ್ದ ತಪ್ಪಿನಿಂದಾಗಿ ಭಾರತದ ಭೂಮಿ ಚೀನಾ ಪಾಲಾಯಿತು. ಈಗ ಒಂದಿಂಚೂ ಜಾಗ ಚೀನಾ ಪಾಲಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರ ವಹಿಸಿದ್ದಾರೆ. ಚೀನಾ ಹಾಗೂ ನಮ್ಮ ಸೈನಿಕರ ನಡುವೆ ಘರ್ಷಣೆ ನಡೆದರೂ ಆ ಬಗ್ಗೆ ಕಾಂಗ್ರೆಸ್‌ ಮುಖಂಡರು ಹಗುರವಾಗಿ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಸೋಲುತ್ತಿರುವ ಕಾಂಗ್ರೆಸ್‌ ಮುಖಂಡರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು.

ರೈತರಿಂದ ಕಪ್ಪು ಬಟ್ಟೆ ಪ್ರದರ್ಶನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ರೈತಸಂಘದ ಸಾವಿರಾರು ರೈತರು ಪಾಂಡವಪುರದ ಶ್ರೀರಂಗಪಟ್ಟಣ ರಸ್ತೆಯಲ್ಲಿ ಸೇರಿದ್ದರು. ಆದರೆ, ಮುಖ್ಯಮಂತ್ರಿಗಳು ರೈತರನ್ನು ಭೇಟಿಯಾಗದೆ ಮುಂದೆ ಸಾಗಿದರು. ಇದರಿಂದ ಕೆರಳಿದ ರೈತರು ಕಪ್ಪು ಬಟ್ಟೆ ಪ್ರದರ್ಶಿಸಿದರು. ಮುಖ್ಯಮಂತ್ರಿ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.