ಶ್ರೀನಗರ (Srinagar): ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಸ್ಥಳೀಯ ಉಗ್ರರು ಹತರಾಗಿದ್ದು, ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ನಡೆದ ಮತ್ತೊಂದು ಎನ್ಕೌಂಟರ್ ನಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಕುಪ್ವಾರದಲ್ಲಿ ಉಗ್ರಗಾಮಿಗಳು ಮತ್ತು ಸಶಸ್ತ್ರ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಕುಲ್ಗಾಮ್‌ನಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ತಂಡವು ಉಗ್ರ ಶೌಕತ್ ಅಹ್ಮದ್ ಶೇಖ್‌ನಿಂದ ಪಡೆದ ಮಾಹಿತಿ ನಂತರ ಕುಪ್ವಾರದ ಅರಣ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ ನ್ನು ಈ ಹಿಂದೆ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಈ ವೇಳೆ ದೊರೆತ ಮಾಹಿತಿಗಳ ಆಧಾರದ ಮೇಲೆ ಉಗ್ರರ ಅಡಗುತಾಣದ ಹುಡುಕಾಟದ ಸಂದರ್ಭದಲ್ಲಿ, ಉಗ್ರರು ಜಂಟಿ ಶೋಧನಾ ತಂಡದ ಮೇಲೆ ಗುಂಡಿನ ದಾಳಿ ಮಾಡಿದರು. ಈ ವೇಳೆ ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಎನ್ಕೌಂಟರ್ ಆರಂಭವಾಗಿದೆ. ಆರಂಭಿಕ ಗುಂಡಿನ ಚಕಮಕಿಯಲ್ಲಿ, ಒಬ್ಬ ಉಗ್ರ ಹತ್ಯೆಯಾಗಿದ್ದ. ನಂತರದ ಎನ್‌ಕೌಂಟರ್‌ನಲ್ಲಿ, ಇದುವರೆಗೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ.