ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆಯಾಗಿದೆ. ಇನ್ನೊಂದೆಡೆ, ಸಿಆರ್‌ಪಿಎಫ್ ವಾಹನದ ಮೇಲೆ ಶಸ್ತ್ರಸಜ್ಜಿತ ಭಯೋತ್ಪಾದಕ ದಾಳಿ ನಡೆಸಿದ್ದಾನೆ.
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಳೆದ ಆರು ದಿನಗಳಿಂದ ಅನಂತ್ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪ್ರದೀಪ್ ಸಿಂಗ್ (27) ಯೋಧ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇವರು ಉಗ್ರ ದಮನ ಜಂಟಿ ಕಾರ್ಯಾಚರಣೆಯ ಭಾಗವಾಗಿದ್ದರು. ಸೋಮವಾರ ಸಂಜೆ 5 ಗಂಟೆಗೆ ಮೃತದೇಹ ದೊರೆತಿದೆ.
ಶಸ್ತ್ರಸಜ್ಜಿತ ಭಯೋತ್ಪಾದಕನೊಬ್ಬ ಶ್ರೀನಗರ ಜಿಲ್ಲೆಯ ಖನ್ಯಾರ್ ಪ್ರದೇಶದಲ್ಲಿ ಸಿಆರ್ಪಿಎಫ್ನ ಬುಲೆಟ್ ಪ್ರೂಫ್ ವಾಹನವೊಂದರ ಮೇಲೆ ದಾಳಿ ನಡೆಸಿದ್ದಾನೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ದಾಳಿಯನ್ನು ಹಿಮ್ಮೆಟ್ಟಿಸಿದರು ಎಂದು ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಗರ ಪೊಲೀಸರು ಅಧಿಕೃತ ಎಕ್ಸ್ ಖಾತೆಯಲ್ಲಿ (ಹಿಂದಿನ ಟ್ವಿಟರ್) ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ವರದಿಯಾಗಿಲ್ಲ. ಸಿಆರ್‌ಪಿಎಫ್ ವಾಹನದ ಮೇಲೆ ಗುಂಡು ಹಾರಿಸಿದ ಬಳಿಕ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.