ಮನೆ ಕಾನೂನು ‘ಜನ ಗಣ ಮನ’ ಹಾಗೂ ‘ವಂದೇ ಮಾತರಂ’ಗೆ ಸಮಾನ ರೀತಿಯಲ್ಲಿ ಗೌರವ ನೀಡಬೇಕು: ದೆಹಲಿ ಹೈಕೋರ್ಟ್’ಗೆ...

‘ಜನ ಗಣ ಮನ’ ಹಾಗೂ ‘ವಂದೇ ಮಾತರಂ’ಗೆ ಸಮಾನ ರೀತಿಯಲ್ಲಿ ಗೌರವ ನೀಡಬೇಕು: ದೆಹಲಿ ಹೈಕೋರ್ಟ್’ಗೆ ಕೇಂದ್ರ ಸರ್ಕಾರ

0

ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಹಾಡು ‘ವಂದೇ ಮಾತರಂ’ಗೆ ಸಮಾನ ಸ್ಥಾನಮಾನ ಇದ್ದು  ದೇಶದ ಪ್ರತಿಯೊಬ್ಬ ಪ್ರಜೆ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ಶುಕ್ರವಾರ ದೆಹಲಿ ಹೈಕೋರ್ಟ್’ಗೆ ತಿಳಿಸಿದೆ.

 [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಬಂಕಿಮ ಚಂದ್ರ ಚಟರ್ಜಿ ವಿರಚಿತ ‘ವಂದೇ ಮಾತರಂ’ಗೆ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಬರೆದಿರುವ ‘ಜನ-ಗಣ-ಮನ’ದ ಸ್ಥಾನಮಾನ ನೀಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆ ನೀಡಿರುವ ಸರ್ಕಾರ ರಾಷ್ಟ್ರೀಯ ಹಾಡಿಗೆ ಭಾರತದ ಜನಮಾನಸದಲ್ಲಿ ಅನನ್ಯ ಮತ್ತು ವಿಶಿಷ್ಟ ಸ್ಥಾನ ಇದೆ ಎಂದಿದೆ.

ಕೇಂದ್ರ ಸರ್ಕಾರ 1971ರಲ್ಲಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವ ಅಥವಾ ಅಂತಹ ರಾಷ್ಟ್ರಗೀತೆ ಹಾಡುತ್ತಿರುವ ಸಭೆಗೆ ಅಡಚಣೆ ಉಂಟುಮಾಡುವ ಕ್ರಮ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಡೆ ಕಾಯಿದೆಯನ್ನು ಜಾರಿಗೊಳಿಸಿತು. ಆದರೆ ವಂದೇ ಮಾತರಂ ವಿಚಾರದಲ್ಲಿ ಅಂತಹ ದಂಡನೀಯ ನಿಯಮಗಳನ್ನು ರೂಪಿಸಲಿಲ್ಲ ಮತ್ತು ಅದನ್ನು ಹಾಡುವ ನುಡಿಸುವ ಸಂದರ್ಭಗಳನ್ನು ಸೂಚಿಸಲಿಲ್ಲ ಎಂದು ಅದು ವಿವರಿಸಿದೆ.

ರಾಷ್ಟ್ರಗೀತೆ ಮತ್ತು ವಂದೇ ಮಾತರಂಗೆ ಅವುಗಳದೇ ಆದ ಪಾವಿತ್ರ್ಯತೆ ಇದ್ದರೂ ಸಮಾನ ಗೌರವಕ್ಕೆ ಅರ್ಹವಾಗಿದ್ದರೂ ಅದು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ವಿಷಯವಾಗಬಾರದು ಎಂದು ಗೃಹ ಸಚಿವಾಲಯ ಹೇಳಿದೆ.  ಇದೇ ರೀತಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸಿದ್ದು ಯಾವುದೇ ನಿರ್ದೇಶನ ನೀಡಲು ನಿರಾಕರಿಸಿವೆ ಎಂದು ನ್ಯಾಯಾಲಯಕ್ಕೆ ಅದು ತಿಳಿಸಿದೆ.

ಮೇ ತಿಂಗಳಲ್ಲಿ ಉಪಾಧ್ಯಾಯ ಅವರ ಮನವಿಗೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ನೀಡಿತ್ತು. ನವೆಂಬರ್ 9 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಹಿಂದಿನ ಲೇಖನಮೈಸೂರು: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೆಇಬಿ ಕಂಬ, ಮರದ ಕೊಂಬೆ
ಮುಂದಿನ ಲೇಖನಕಲಬುರಗಿ: ಬಾಲಕಿ ಅಪಹರಿಸಿ ಅತ್ಯಾಚಾರ- ಆರೋಪಿಗೆ 23 ವರ್ಷ ಜೈಲು