ಕೊಪ್ಪಳ: ಅಕ್ರಮ ಗಣಿಗಾರಿಕೆ ಹಗರಣ ಪ್ರಕರಣದಲ್ಲಿ ಆರೋಪಿಯಾಗಿದ್ದ ಗಂಗಾವತಿಯ ಶಾಸಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ, ಅವರ ಬೆಂಬಲಿಗರು ಗಂಗಾವತಿಯಲ್ಲಿ ಭಾರಿ ಸಂಭ್ರಮಾಚರಣೆ ನಡೆಸಿದರು.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರೆಡ್ಡಿಗೆ ಈ ಹಿಂದೆ ಹಲವು ಬಾರಿ ವಿಚಾರಣೆ ಎದುರಾಗಿತ್ತು. ಈಗ ಹೈಕೋರ್ಟ್ ಅವರು ಸಲ್ಲಿಸಿದ ಜಾಮೀನಿನ ಅರ್ಜಿಯನ್ನು ಪರಿಗಣಿಸಿ, ಕೆಲವು ನಿಬಂಧನೆಗಳೊಂದಿಗೆ ಜಾಮೀನು ನೀಡಿದೆ. ಜೊತೆಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ 7 ವರ್ಷ ಜೈಲು ಶಿಕ್ಷೆ ಆದೇಶಕ್ಕೆ ತಡೆ ನೀಡಿದೆ.
ಗಂಗಾವತಿ ನಗರದ ಪ್ರಮುಖ ಬೀದಿಗಳಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೇ, ಎತ್ತುಗಳಿಗೆ ಬಣ್ಣ ಹಚ್ಚಿ, ಜನಾರ್ದನ ರೆಡ್ಡಿಯವರ ಫೋಟೋ ಹಿಡಿದು ಘೋಷಣೆ ಕೂಗಿ ತಮ್ಮ ಸಂತಸ ವ್ಯಕ್ತಪಡಿಸಿದರು.














