ಬೆಂಗಳೂರು: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಹಾಗೂ ಶಾಸಕ ಜನಾರ್ಧನ ರೆಡ್ಡಿ ಅವರನ್ನು ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶ ನೀಡಿದೆ.
ಹೈದರಾಬಾದ್ ಪೊಲೀಸರು ಬಾಡಿ ವಾರಂಟ್ ಆಧಾರದ ಮೇಲೆ ಇಂದು ಜನಾರ್ಧನ ರೆಡ್ಡಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶ ಸಂತೋಷ ಗಜಾನನ್ ಭಟ್ ಅವರು ವಿಚಾರಣೆ ನಡೆಸಿ, ರೆಡ್ಡಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ಜೊತೆಗೆ, ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದರು.
ಈ ಪ್ರಕರಣ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದು, ಜನಾರ್ಧನ ರೆಡ್ಡಿ ಸೇರಿದಂತೆ ಎಲ್ಲ ಆರೋಪಿಗಳು ಇಂದು ಕೋರ್ಟ್ ಮುಂದೆ ಹಾಜರಾದರು. ನ್ಯಾಯಾಲಯದ ಖುದ್ದು ಹಾಜರಾತಿ ಸೂಚನೆಯ ಹಿನ್ನೆಲೆಯಲ್ಲಿ, ರೆಡ್ಡಿಯನ್ನು ಕೋರ್ಟ್‌ಗೆ ಕರೆತರಲಾಗಿತ್ತು.














