ಬೆಂಗಳೂರು : ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಜನತಾ ದರ್ಶನ ಆರಂಭಿಸುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವ ಜಮೀರ್ ಅಹಮದ್ ಘೋಷಿಸಿದ್ದಾರೆ.
ವಸತಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಸವಲತ್ತು ಮತ್ತು ಸೌಲಭ್ಯ ಗಳಿಗಾಗಿ ಸಾರ್ವಜನಿಕರು ಬೆಂಗಳೂರಿನ ವರೆಗೆ ಬರುವುದು ತಪ್ಪಿಸಲು ಜನರ ಬಳಿಗೆ ನಾನೇ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಗುರುವಾರ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಎರಡು ದಿನ ಜನತಾ ದರ್ಶನ ನಡೆಸಲಿದ್ದೇನೆ. ಜಿಲ್ಲೆ ವ್ಯಾಪ್ತಿಯ ಎರಡೂ ಇಲಾಖೆಗಳ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಲ್ಲಿರಲಿದ್ದಾರೆ ಎಂದು ಹೇಳಿದರು.
ಆಗಸ್ಟ್ ಒಳಗೆ ಎರಡೂ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಲು ಅಧಿಕಾರಿಗಳಿಗೆ ಎರಡು ತಿಂಗಳ ಗಡುವು ನೀಡುತ್ತಿದ್ದೇನೆ ಎಂದು ಸೂಚನೆ ನೀಡಿದರು.
ಜನತಾ ದರ್ಶನ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಅಥವಾ ಅಧಿಕಾರಿಗಳ ಮಟ್ಟದಲ್ಲಿ ತಪ್ಪು ನಡೆದಿದ್ದರೆ ದೂರುಗಳು ಬಂದರೆ ಅಂತಹವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೃಹಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ, ಕೊಳಗೇರಿ ಅಭಿವೃದ್ಧಿ ಮಂಡಳಿ, ಆಲ್ಪ ಸಂಖ್ಯಾತರ ಇಲಾಖೆ ಗೆ ಸಂಬಂಧಿಸಿದ ಕಾರ್ಯಕ್ರಮ ಗಳು ಮತ್ತು ಯೋಜನೆಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಯಾವುದೇ ದುರುಪಯೋಗ ಇಲ್ಲದಂತೆ ಜಾರಿಗೊಳಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಕಡು ಬಡುವರಿದ್ದು ನೀವು ಮಾಡುವ ಕೆಲಸ ದೇವರು ಮೆಚ್ಚುವಂತೆ ಇರಬೇಕು ಎಂದು ಕಿವಿಮಾತು ಹೇಳಿದರು.
ಎರಡೂ ಇಲಾಖೆಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಕಲ್ಯಾಣ ಕ್ಕೆ ಇರುವ ಇಲಾಖೆ ಗಳು ಇಲ್ಲಿ ಕೆಲಸ ಮಾಡುವುದು ಪುಣ್ಯದ ಕೆಲಸ ಎಂದು ಹೇಳಿದರು.
ರಾಜ್ಯದಲ್ಲಿ ಹೊಸದಾಗಿ ಘೋಷಿಸಿರುವ ಬೆಂಗಳೂರಿನ 25 ಸೇರಿದಂತೆ 154 ಕೊಳೆಗೇರಿಗಳಲ್ಲಿ ಮೂಲ ಸೌಕರ್ಯ ಸೇರಿ ಇತರೆ ಅಭಿವೃದ್ಧಿ ಕಾರ್ಯ ಒಂದು ತಿಂಗಳಲ್ಲಿ ಪ್ರಾರಂಭಿಸಬೇಕು. ತಿಂಗಳ ಗಡುವು ನಂತರ ನಾನೇ ಖುದ್ದಾಗಿ ಡಿಧೀರ್ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
500ಕೋಟಿ ರೂ. ಅನುದಾನಕ್ಕೆ ಬೇಡಿಕೆ
ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಅನುದಾನ ಕಡಿಮೆ ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಚಾಲ್ತಿ ಯೋಜನೆಗಳಿಗೂ ಅನುದಾನ ಕೊರತೆ ಇದೆ. ಸಿಬ್ಬಂದಿಗೆ ವೇತನ ಭತ್ಯೆಗೂ ಕಷ್ಟ ಆಗಿದೆ ಎಂದು ಸಭೆಯಲ್ಲಿ ಪ್ರಸ್ತಾಪ ಆದಾಗ ಮಧ್ಯ ಪ್ರವೇಶ ಮಾಡಿದ ಸಚಿವರು, ಬಜೆಟ್ ಗೆ ಮುನ್ನ ಯಾವೆಲ್ಲಾ ಯೋಜನೆ ಕಾರ್ಯಕ್ರಮ ಗಳಿಗೆ ಅನುದಾನದ ಅಗತ್ಯ ಇದೆ ಎಂಬುದರ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ವಾರ್ಷಿಕ 500 ಕೋಟಿ ರೂ. ಅನುದಾನ ಕ್ಕೆ ಸರ್ಕಾರದ ಮುಂದೆ ಬೇಡಿಕೆ ಇಡೋಣ ಎಂದು ಸೂಚಿಸಿದರು.
ಪ್ರಸ್ತುತ ಮಂಡಳಿ ಬಳಿ ಇರುವ 49 ಕೋಟಿ ರೂ. ಕೊಳೆಗೇರಿ ಗಳಲ್ಲಿ ತುರ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿದರುಕೊಳೆಗೇರಿ ಅಭಿವೃದ್ಧಿ ಮಂಡಳಿ ಬೇರೆ ಬೇರೆ ಇಲಾಖೆ ಗಳಿಗೆ ಕಟ್ಟಡ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿಕೊಂಡರೆ ಯೋಜನಾ ಮೊತ್ತದ ಶೇ. 10 ರಷ್ಟು ಸೇವಾ ಶುಲ್ಕ ಪಡೆಯಲು ನಿರ್ಣಯ ಕೈಗೊಳ್ಳಿ. ಇದರಿಂದ ಮಂಡಳಿ ಆರ್ಥಿಕವಾಗಿ ಶಕ್ತಿ ಬರುತ್ತದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 90 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ನೂತನ ಸಮುಚ್ಚಯ ಕಾಮಗಾರಿ ವೀಕ್ಷಿಸಿ ಆದಷ್ಟು ಬೇಗ ಪೂರ್ಣ ಗೊಳಿಸುವಂತೆ ನಿರ್ದೇಶನ ನೀಡಿದರು. ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.