ಈ ಆಸನಕ್ಕೆ ಏಕಪಾದ ಪಶ್ಚಿಮತಾನಾಸನ ಎಂಬ ಹೆಸರೂ ಇದೆ.
ಮಾಡುವಕ್ರಮ
1) ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಕುಳಿತು, ಕಾಲುಗಳನ್ನು ಚಾಚಬೇಕು.
2) ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಹಿಮ್ಮಡಿಯು ಗುದಾಂಡಕೋಶಗಳ ಮಧ್ಯದ ಜಾಗವನ್ನು ಒತ್ತುವಂತೆಯೂ ಅಂಗಾಲು ಬಲತೊಡೆಯನ್ನು ಸ್ಪರ್ಶಿಸುವಂತೆಯೂ ಇಟ್ಟುಕೊಳ್ಳಬೇಕು.
3) ಬಲಗಾಲಿನ ಪಾದವನ್ನು ಎರಡೂ ಕೈಗಳಿಂದ ಹಿಡಿದುಕೊಂಡು, ಉಸಿರನ್ನು ಹೊರಕ್ಕೆ ಬಿಡುತ್ತಾ, ಮುಂದಕ್ಕೆ ಬಾಗಬೇಕು. ( ಅಂದರೆ ಪ್ರಾರಂಭದಲ್ಲಿ ಮೊಳಕಾಲಿಗೆ ಹಣೆಯನ್ನು, ಅನಂತರ ಗಲ್ಲ ಮತ್ತು ಎದೆಯನ್ನು ಮುಟ್ಟಿಸಲು ಪ್ರಯತ್ನಿಸಬೇಕು). ಈ ಸ್ಥಿತಿಯಲ್ಲಿ ಮೊಳಕೈ ನೆಲವನ್ನು ಸ್ಪರ್ಶಿಸಿರುತ್ತದೆ. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದ ನಂತರ 2-3 ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿ ಇದ್ದು ಅನಂತರ ಕಾಲುಗಳನ್ನು ಬದಲಾಯಿಸಬಹುದು.
ಪಶ್ಚಿಮೋತ್ತಾನಾಸನ ಮತ್ತು ಜಾನುಶೀರ್ಷಾಸನಗಳಲ್ಲಿನ ವ್ಯತ್ಯಾಸವೆಂದರೆ ಪಶ್ಚಿಮೋತ್ತಾನಾಸನದಲ್ಲಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿರುತ್ತೇವೆ. ಆದರೆ ಜಾನುಶೀರ್ಷಾಸನದಲ್ಲಿ ಒಂದು ಕಾಲನ್ನು ಮಡಿಸಿರುತ್ತೇವೆ. ಲಾಭಗಳು ಮಾತ್ರ ಎರಡು ಆಸನಗಳಲ್ಲೂ ಒಂದೇ ರೀತಿ.
ಲಾಭಗಳು
ಜಾನುಶೀರ್ಷಾಸನದ ಅಭ್ಯಾಸದಿಂದ ಉದರಕ್ಕೆ ಸಂಬಂಧಿಸಿದ ಅನೇಕ ರೋಗಗಳು ದೂರವಾಗುವವು. ಬೆನ್ನು, ಸೊಂಟ ಮತ್ತು ಕಾಲುಗಳಲ್ಲಿನ ನ್ಯೂನತೆಗಳೂ ನಿವಾರಣೆಯಾಗುವವು. ವೀರ್ಯರಕ್ಷಣೆಗೆ ಈ ಆಸನವು ಹೆಚ್ಚು ಸಹಕಾರಿ. ಮೂತ್ರಜನಕಾಂಗದ ಚಟುವಟಿಕೆಯೂ ಈ ಆಸನದ ಅಭ್ಯಾಸದಿಂದ ಹೆಚ್ಚುತ್ತದೆ.