ನವದೆಹಲಿ: ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಫೆಮಿಯೊ ಕಿಶಿದಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಹಲವು ಭಾರತೀಯ ತಿನಿಸುಗಳನ್ನು ಸವಿದರು.
ಬುದ್ಧ ಜಯಂತಿ ಉದ್ಯಾನದಲ್ಲಿ ಸೋಮವಾರ ಸಂಜೆ ಗೋಲ್ ಗಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ನನ್ನ ಜಪಾನ್ ಸ್ನೇಹಿತ ಕಿಶಿದಾ ಅವರು ಭಾರತೀಯ ತಿನಿಸುಗಳನ್ನು ಸವಿದರು ಎಂದು ಟ್ವೀಟ್ ಮಾಡಿದ್ದು, ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಿಶಿದಾ ಅವರು 27 ಗಂಟೆಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ನಂತರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಕಿಶಿದಾ ಅವರು ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರಗಳ ಕುರಿತು ಇಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ಕಿಶಿದಾ ಅವರು ಮಾತನಾಡಿದರು.
ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿರುವ ದೇಶಗಳ ಆರ್ಥಿಕತೆಗೆ (ಕಾರ್ಖಾನೆ ಸ್ಥಾಪನೆಯಿಂದ ವಿಪತ್ತು ತಡೆವರೆಗೆ) ಸಹಾಯ ಮಾಡುವ ಉದ್ದೇಶದಿಂದ 75 ಬಿಲಿಯನ್ ಡಾಲರ್’ನಷ್ಟು (ಅಂದಾಜು 6.15 ಲಕ್ಷ ಕೋಟಿ) ಹೂಡಿಕೆ ಮಾಡಲಾಗುವುದು. ನಮ್ಮ ಗುರಿಯನ್ನು ತಲುಪುವಲ್ಲಿ ಭಾರತವು ಮುಖ್ಯವಾದ ಪಾತ್ರವಹಿಸಲಿದೆ ಎಂದು ಕಿಶಿದಾ ಹೇಳಿದ್ದಾರೆ.