ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ನಡುವಿನ ಡಿಸಿಸಿ ಬ್ಯಾಂಕ್ ಚುನಾವಣೆಯ ಫೈಟ್ ಜೋರಾಗಿದ್ದು, ಇಬ್ಬರ ನಡುವಿನ ತಿಕ್ಕಾಟದಿಂದ ಶಾಂತವಾಗಿದ್ದ ಹುಕ್ಕೇರಿ ಕ್ಷೇತ್ರದಲ್ಲಿ ಗಲಾಟೆ ನಡೆದಿದೆ.
ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ರಾಜೇಂದ್ರ ಪಾಟೀಲ ವಿರುದ್ಧ ಅ.19 ರಂದು ಚುನಾವಣೆ ನಡೆಯಲಿದೆ. ಒಂದು ಪ್ರಾಥಮಿಕ ಕೃಷಿ ಪತ್ತಿನಿಂದ ಒಂದು ಮತ ಚಲಾಯಿಸುವ ಅಧಿಕಾರ ಇರುತ್ತದೆ. ಹುಕ್ಕೇರಿ ತಾಲೂಕಿನಲ್ಲಿ ಒಟ್ಟು 90 ಕೃಷಿ ಪತ್ತಿನ ಸಂಘಗಳಿದ್ದು ಒಟ್ಟು 90 ಮತಗಳ ಚಲಾವಣೆ ಆಗಬೇಕಿದೆ.
ಪ್ರಾಥಮಿಕ ಕೃಷಿ ಪತ್ತಿನ ಬಹುಮತವಿರುವ ನಿರ್ದೇಶಕರು ಆ ಒಂದು ಮತದ ಹಕ್ಕನ್ನ ಓರ್ವ ನಿರ್ದೇಶಕರಿಗೆ ನೀಡುವ ಕುರಿತು ಠರಾವ್ ಪಾಸ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಬಣಗಳು ನಿರ್ದೇಶಕರನ್ನು ಓಲೈಕೆ ಜೊತೆಗೆ ಹೈ ಜಾಕ್ ಮಾಡಿ ತಮ್ಮ ಬೆಂಬಲಿಗ ನಿರ್ದೇಶಕರಿಗೆ ಮತದಾನದ ಹಕ್ಕನ್ನು ಪಡೆಯಲು ಮುಂದಾಗಿದ್ದಾರೆ.
ಈ ಕಾರಣಕ್ಕೆ ಪ್ರತಿನಿತ್ಯ ಹುಕ್ಕೇರಿ ತಾಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರ ಬಹುಮತ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಇದಕ್ಕಾಗಿ ಸತೀಶ್ ಜಾರಕಿಹೊಳಿ ಎದುರೇ ಗಲಾಟೆ ಆಗಿದೆ. ಜಾರಕಿಹೊಳಿ ಬೆಂಬಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನ ಪತ್ನಿ ನಿರ್ದೇಶಕನ ಕೊರಳು ಪಟ್ಟಿ ಹಿಡಿದು ಎಳೆದಾಡಿ ಕಪಾಳ ಮೋಕ್ಷ ಮಾಡಿ ರಸ್ತೆಯಲ್ಲೇ ತರಾಟೆ ತೆಗೆದುಕೊಂಡಿದ್ದಾಳೆ.

ಮದಿಹಳ್ಳಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿಗೆ ಪತ್ನಿ ಲಗಮವ್ವ ಏಟು ನೀಡಿದ್ದಾಳೆ. ಗಂಡ ಹೆಂಡತಿ ಜಗಳ ಬಿಡಿಸಲು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬಂದ ಮಾಜಿ ಸಂಸದ ರಮೇಶ್ ಕತ್ತಿ ಕೂಡ ಬಂದಿದ್ದರಿಂದ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿತ್ತು.
ಬೆಳವಣಿಗೆಗಳ ನಡುವೆ ಬೆಲ್ಲದ ಬಾಗೇವಾಡಿ ಗ್ರಾಮದ ಕತ್ತಿ ಒಡೆತನದ ವಿಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ತಡರಾತ್ರಿ ಹೈಡ್ರಾಮಾ ನಡೆಯಿತು. ಪಾಶ್ಚಾಪೂರ ಗ್ರಾಮದ 6 ಪಿಕೆಪಿಎಸ್ ನಿರ್ದೇಶಕರನ್ನು ಯಮಕನಮರಡಿ ಪೊಲೀಸರು ಬಂದು ವಾಪಸ್ ಪಾಶ್ಚಾಪೂರ ಗ್ರಾಮಕ್ಕೆ ಕರೆ ತಂದಿದ್ದಾರೆ.
ಕೆಲದಿನಗಳಿಂದ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಯಮಕನಮರಡಿ ಪಿಐ ಜಾವೇದ ಮುಶಾಪೂರೆ ವಿಎಸ್‌ಎಲ್ ಕಾರ್ಖಾನೆಗೆ ತೆರಳಿ ವಾಪಸ್ ಕಳಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಯಾವುದೇ ಕಾರಣಕ್ಕೂ ವಾಪಸ್ ಕಳುಹಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು ಹಾಗೂ ರಮೇಶ ಕತ್ತಿ ನಡುವೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ನಿರ್ದೇಶಕರನ್ನು ವಾಪಸ್ ಪಾಶ್ಚಾಪೂರ ಗ್ರಾಮಕ್ಕೆ ಕರೆ ತಂದು ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ತಿಕ್ಕಾಟ ತಾರಕಕ್ಕೇರುತ್ತಿದ್ದು, ಮುಂದೆ ಬೆಳಗಾವಿ ಜಿಲ್ಲೆಯಲ್ಲಿ ಈ ಎರಡು ಕುಟುಂಬಗಳ ರಣಯುದ್ಧ ಹೊಸ ಅಧ್ಯಾಯ ಬರೆಯುವದರಲ್ಲಿ ಸಂಶಯವೇ ಇಲ್ಲ ಎಂದು ಹೇಳಲಾಗಿದೆ.















