ಗುವಾಹಟಿ: ವೇಗದ ಬೌಲರ್ ಜಸ್’ಪ್ರೀತ್ ಬೂಮ್ರಾ ಅವರು ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಅಲಭ್ಯರಾಗಿದ್ದಾರೆ.
ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದರೂ ಅವರು ಪೂರ್ಣ ಫಿಟ್’ನೆಸ್ ಮರಳಿ ಪಡೆದಿಲ್ಲ. ಇದರಿಂದ ಅವರನ್ನು ಆಡಿಸದಿರಲು ತಂಡದ ಆಡಳಿತ ನಿರ್ಧರಿಸಿದೆ.
ಬೂಮ್ರಾ ಸಹ ಆಟಗಾರರ ಜತೆ ಗುವಾಹಟಿಗೆ ಪ್ರಯಾಣಿಸಿಲ್ಲ. ಅವರು ಪೂರ್ಣ ಫಿಟ್’ನೆಸ್ ಪಡೆಯಲು ಇನ್ನೂ ಕೆಲವು ಸಮಯ ಬೇಕು. ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಅವರ ಸೇವೆ ತಂಡಕ್ಕೆ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ನ್ಯೂಜಿಲೆಂಡ್ ವಿರುದ್ಧ ಜನವರಿ 18ರಂದು ಆರಂಭವಾಗಲಿರುವ ಏಕದಿನ ಸರಣಿಯ ವೇಳೆಗೆ ಅವರು ತಂಡಕ್ಕೆ ಮರಳುವರೇ ಎಂಬುದನ್ನು ನೋಡಬೇಕಿದೆ. ಬೂಮ್ರಾ ಅವರನ್ನು ಶ್ರೀಲಂಕಾ ಎದುರಿನ ಸರಣಿಗೆ ಆರಂಭದಲ್ಲಿ ಪರಿಗಣಿಸಿರಲಿಲ್ಲ. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್’ಸಿಎ)ಯಲ್ಲಿ ಫಿಟ್’ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರಿಗೆ ತಂಡ ಸೇರುವ ಅವಕಾಶ ನೀಡಲಾಗಿತ್ತು.
ಹೋದ ವರ್ಷ ಇಂಗ್ಲೆಂಡ್ ಪ್ರವಾಸದ ಬೆನ್ನಲ್ಲೇ ಬೆನ್ನುಹುರಿಯ ಗಾಯದಿಂದ ಬಳಲಿದ್ದ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಆಡಿರಲಿಲ್ಲ.ಟಿ20 ವಿಶ್ವಕಪ್’ನಲ್ಲಿಆಡಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಬೆನ್ನು ನೋವು ಉಲ್ಬಣಿಸಿದ್ದರಿಂದ ವಿಶ್ವಕಪ್‌ನಿಂದಲೂ ಹೊರಗುಳಿದಿದ್ದರು.
ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಫೆ.9 ರಂದು ಆರಂಭವಾಗಲಿದ್ದು, ಆ ವೇಳೆಗೆ ಬೂಮ್ರಾ ಫಿಟ್‌ನೆಸ್ ಮರಳಿ ಪಡೆಯುವ ವಿಶ್ವಾಸದಲ್ಲಿ ತಂಡದ ಆಡಳಿತ ಇದೆ.
ಪರಿಷ್ಕೃತ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.