ಮನೆ ರಾಷ್ಟ್ರೀಯ ಐಸಿಸಿಗೆ ನೂತನ ಸಾರಥಿ ಜಯ್‌ ಶಾ; ಅಧಿಕಾರ ಸ್ವೀಕಾರ

ಐಸಿಸಿಗೆ ನೂತನ ಸಾರಥಿ ಜಯ್‌ ಶಾ; ಅಧಿಕಾರ ಸ್ವೀಕಾರ

0

ದುಬೈ: ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್‌ ಶಾ ರವಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನ್ಯೂಜಿಲ್ಯಾಂಡ್‌ನ‌ ಗ್ರೆಗ್‌ ಬಾರ್ಕ್ಲೆ ಅವರ ಸ್ಥಾನವನ್ನು ಜಯ್‌ ಶಾ ತುಂಬಿದ್ದಾರೆ.

Join Our Whatsapp Group

ಈ ಮೂಲಕ ಜಾಗತಿಕ ಕ್ರಿಕೆಟ್‌ ಮಂಡಳಿಯಲ್ಲಿ ಮುಖ್ಯಸ್ಥರಾದ ಭಾರತದ 5ನೆಯ ಮತ್ತು ಅತೀ ಕಿರಿಯ ಅಧಿಕಾರಿಯಾಗಿ ಜಯ್‌ ಶಾ ಗುರುತಿಸಿಕೊಂಡಿದ್ದಾರೆ. ಅವರಿಗೀಗ ಕೇವಲ 36 ವರ್ಷ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರರಾಗಿರುವ ಜಯ್‌ ಶಾ ಕಳೆದ 5 ವರ್ಷಗಳ ಕಾಲ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಹಿಂದೆ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಕ್‌ ಬಾರ್ಕ್ಲೆ ತನ್ನ ಅವಧಿ ಮುಂದುವರಿಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಐಸಿಸಿ ನಿರ್ದೇಶಕರ ಮಂಡಳಿಯಿಂದ ಅವಿರೋಧವಾಗಿ ಆಯ್ಕೆಯಾಗಿರುವ ಜಯ್‌ ಶಾ, ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಇದಕ್ಕೂ ಮುನ್ನ ಉದ್ಯಮಿ ಜಗಮೋಹನ್‌ ದಾಲ್ಮಿಯಾ, ರಾಜ್ಯಸಭೆ ಸದಸ್ಯ ಶರದ್‌ ಪವಾರ್‌, ನ್ಯಾಯವಾದಿ ಶಶಾಂಕ್‌ ಮನೋಹರ್‌, ಕೈಗಾರಿಕೋದ್ಯಮಿ ಎನ್‌. ಶ್ರೀನಿವಾಸನ್‌ ಜಾಗತಿಕ ಕ್ರಿಕೆಟ್‌ ಮಂಡಳಿಯಲ್ಲಿ ಕರ್ತವ್ಯ ನಿಭಾಯಿಸಿದ್ದರು. ಬಿಸಿಸಿಐ ಇನ್ನು ನೂತನ ಕಾರ್ಯದರ್ಶಿ ಒಬ್ಬರನ್ನು ಕಾಣಬೇಕಿದೆ.

ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬೆನ್ನಲ್ಲೇ, 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯ ಜತೆಗೆ ಜಗದ ಗಲದ ಅಭಿಮಾನಿಗಳಿಗೆ ಕ್ರಿಕೆಟ್‌ ಹೆಚ್ಚು ತಲುಪುವಂತೆ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಜಯ್‌ ಶಾ ಹೇಳಿದ್ದಾರೆ.