ಮೈಸೂರು: ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲ್ಲುವ ಶಕ್ತಿಯಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಜೆಡಿಎಸ್ ಬಳಿ ಕೇವಲ 32 ಮತಗಳಿವೆ. ಗೆಲುವಿಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಮೂಲಕ ಜೆಡಿಎಸ್ ಅಲ್ಪ ಸಂಖ್ಯಾತರ ವಿರೋಧಿ ಎಂಬುದು ಸಾಬೀತಾಗಿದೆ.
ಜೆಡಿಎಸ್ ಗೆ ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಕುಪೇಂದ್ರರೆಡ್ಡಿ ಬದಲು ಸಿ.ಎಂ ಇಬ್ರಾಹಿಂಗೆ ಟಿಕೆಟ್ ನೀಡಬಹುದಿತ್ತು. ದೇವೇಗೌಡರು ರಾಜ್ಯಸಭಾ ಸದಸ್ಯರಾಗಲು ಕಾಂಗ್ರೆಸ್ ಕೊಡುಗೆ ಕಾರಣವಾಗಿದೆ. ಹಾಗಾಗಿ ಕೂಡಲೇ ಜೆಡಿಎಸ್ ಅಭ್ಯರ್ಥಿಯನ್ನು ಹಿಂಪಡೆದು ಅಲ್ಪ ಸಂಖ್ಯಾತ ಸಮುದಾಯದ ಮನ್ಸೂರ್ ಅಲಿ ಖಾನ್ ಗೆಲುವಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೂ ಕಾಂಗ್ರೆಸ್ ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವು ಸಾಧಿಸಲಿದ್ದಾರೆ ಎಂದರು.
ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಬಿಜೆಪಿ ಸ್ಪಾನ್ಸರ್ ಗೂಂಡಾ ಭರತ್ ಶಟ್ಟಿ ಹಲ್ಲೆ ಮಾಡಿದ್ದಾರೆ. ಈ ಭರತ್ ಶಟ್ಟಿ ಯಾರ ಜೊತೆ ಇದ್ದ ಎಂಬುದರ ಪೋಟೊ ನಮ್ಮ ಬಳಿ ಇದೆ. ಮುತಾಲಿಕ್ ಸ್ವಯಂ ಘೋಷಿತ ಈ ರಾಜ್ಯದ ಮುಖ್ಯಮಂತ್ರಿ. ಅವರು ಏನು ಹೇಳ್ತಾರೊ ಅದು ನಾಳೆ ನಡೆಯುತ್ತೆ. ಅಂತವರ ಜೊತೆ ಭರತ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಮೋದಿಗೆ ಜೈಕಾರ ಕೂಗಿಕೊಂಡು ಹಲ್ಲೆ ಮಾಡಿದ್ದಾರೆ. ಪೊಲೀಸರು ಏನ್ ಮಾಡ್ತಾ ಇದ್ರು. ಅರ್ಧ ಗಂಟೆ ಕಾಲ ಅಲ್ಲಿ ಯಾವುದೇ ಪೊಲೀಸರು ಇರಲಿಲ್ಲವಂತೆ. ರಾಕೇಶ್ ಟಿಕಾಯತ್ ಕೊಲೆ ಮಾಡಬೇಕು ಎಂಬ ಫ್ಲಾನ್ ಮಾಡಿದ್ರು ಎಂಬ ಮಾಹಿತಿ ನಮಗೆ ಇದೆ. ಬಿಜೆಪಿ ಸ್ಪಾನ್ಸರ್ ಗೂಂಡಗಳು ಟಿಕಾಯತ್ ಹೊಡಿಯಬೇಕು ಎಂಬ ಫ್ಲಾನ್ ಮಾಡಿದ್ದರು. ಬಿಜೆಪಿ ಅವರು ಭರತ್ ಶೆಟ್ಟಿಗೆ ಸುಫಾರಿ ಕೊಟ್ಟಿದ್ದರು. ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಭರತ್ ಶೆಟ್ ಅಂಡ್ ಗ್ಯಾಂಗ್ ಬಂಧಿಸಬೇಕು ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.
ಮೈಸೂರು ಬೆಂಗಳೂರು ರಸ್ತೆ ಮೋದಿ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ , ಸ್ಪೀಚ್ ಅಂಡ್ ಹಿಯರಿಂಗ್ 150 ಕೋಟಿ ಕೊಟ್ಟಿದ್ದೀನಿ ಎನ್ನುತ್ತಾರೆ. ಇದೆಲ್ಲ ಸುಳ್ಳು ಮಾಹಿತಿಗಳು. ಮೈಸೂರಿಗೆ ಯೋಗ ಮಾಡಲು ಬರುವ ಮೋದಿ ಉತ್ತರಿಸಬೇಕು. ಈ ಬಗ್ಗೆ ಮೋದಿ ಅವರು ಅಥವಾ ರಾಜ್ಯದ ಮತ್ತೊಬ್ಬ ಮೋದಿ ಪ್ರಹ್ಲಾದ್ ಜೋಷಿ ಹಾಗೂ ಪ್ರತಾಪ್ ಸಿಂಹ ಉತ್ತರಿಸಲಿ. ಸುಳ್ಳು ಹೇಳುವುದರಲ್ಲಿ ಈ ನಾಯಕರು ಪಿಹೆಚ್ಡಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಅಭಿವೃದ್ದಿ ವಿಚಾರದಲ್ಲಿ ಮೈಸೂರು 10ವರ್ಷ ಹಿಂದಕ್ಕೆ ಹೋಗಿದೆ. ಈ ಭಾಗದ ಜನಕ್ಕೆ ಮೋದಿ ಮೋಸ ಮಾಡಿದ್ದಾರೆ. ಇದೀಗ ಮೋದಿ ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಹೇಳೆಯಿಲ್ಲ ಎಂದು ಪ್ರತಾಪ್ ಸಿಂಹ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನೇ ಹೇಳಿಲ್ಲ ಎಂದು ಹೇಳುತ್ತಾರೆ. ಸುಳ್ಳು ಹೇಳುವುದೇ ಅಭ್ಯಾಸವಾಗಿದೆ ಎಂದು ವಾಗ್ದಾಳಿ ನಡೆಸಿದರು.