ಮನೆ ರಾಜಕೀಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಎಚ್.ಡಿ.ಕುಮಾರಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಎಚ್.ಡಿ.ಕುಮಾರಸ್ವಾಮಿ

0

ಮೈಸೂರು(Mysuru): ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್​ ಸಕಲಸಿದ್ಧತೆ ಆರಂಭಿಸಿದ್ದು, ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿಯೂ ನಾವು ಸ್ಪರ್ಧಿಸುತ್ತೇವೆ. ನವೆಂಬರ್ 1ರಂದು 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಘೋಷಿಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಲಾರದಲ್ಲಿ ನ.1ರಂದು ಪಂಚರತ್ನ ಯೋಜನೆ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಗಣಪತಿ, ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿ ಯೋಜನೆ ಬಗ್ಗೆ ಮನೆಮನೆಗೆ ಮಾಹಿತಿ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

4 ಹಂತದಲ್ಲಿ ನಿರಂತರವಾಗಿ ಪಂಚರತ್ನ ಯೋಜನೆ ಕಾರ್ಯಕ್ರಮ ನಡೆಯಲಿದೆ. ಕೆಲವರು ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ ಮಾತನಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪರ್ಯಾಯ ಶಕ್ತಿ ಬಗ್ಗೆ ಜನರಿಗೆ ಒಲವಿದೆ. 2023ಕ್ಕೆ ಕನ್ನಡಿಗರ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೆಸಿಆರ್​ ಅವರ ದಲಿತ ಬಂಧು ಕಾರ್ಯಕ್ರಮ ಇಷ್ಟ ಆಯಿತು. ರಾಜ್ಯದಲ್ಲಿ ಆ ಯೋಜನೆ ಜಾರಿಗೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಜೆಡಿಎಸ್‌ಗೆ ಚುನಾವಣಾ ಅಭ್ಯರ್ಥಿಗಳಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ಅಭ್ಯರ್ಥಿಗಳಿಲ್ಲ ಎಂದಾದರೆ ಬಿಜೆಪಿ ಮತ್ತು ಕಾಂಗ್ರೆಸ್​ನವರು ನಮ್ಮ ನಾಯಕರ ಮನೆಬಾಗಿಲು ಬಡಿಯುತ್ತಿರುವುದೇಕೆ ? ಎಂದು ಪ್ರಶ್ನಿಸಿದ ಅವರು, ಬೇರೆ ಪಕ್ಷಕ್ಕೆ ನಮ್ಮ ಪಕ್ಷದಿಂದ ಹೋಗುವವರು ಯಾರೂ ಇಲ್ಲ. ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರುವವರ ಬಗ್ಗೆಯೂ ನಾನು ಏನೂ ಹೇಳುವುದಿಲ್ಲ ಎಂದು  ತಿಳಿಸಿದರು.

ಭಾರತ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಭಾರತ್ ಜೋಡೋ ಯಾತ್ರೆ ಅಲ್ಲ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೋ ಯಾತ್ರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ದೇ ಅವರಿಬ್ಬರನ್ನು ಒಂದು ಮಾಡಲು. ಈ ಅಂಶವು ಗುಂಡ್ಲುಪೇಟೆಯಲ್ಲಿಯೇ ಸಾಬೀತಾಯಿತು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂದಿಗೂ ಒಂದಾಗುವುದಿಲ್ಲ ಎಂದರು.

ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ಅವರ ಅವಧಿಗೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ. ಮೀಸಲಾತಿ ಬಗ್ಗೆ ಹಲವು ಸ್ವಾಮೀಜಿಗಳನ್ನು ರಾಜಕಾರಣಿಗಳೇ ಬೀದಿಗಿಳಿಸಿದ್ದಾರೆ‌. ಮೀಸಲಾತಿ ಮೂಲಕ ಅಸಮಾನತೆ ದೂರ ಮಾಡಲು ಆಗುವುದಿಲ್ಲ. ಅಂತಿಮವಾಗಿ ಇದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ. ಪ್ರತಿ ಕುಟುಂಬವು ಸ್ವಾಭಿಮಾನದಿಂದ ಬದುಕುವ ಆರ್ಥಿಕ, ಶೈಕ್ಷಣಿಕ ಶಕ್ತಿ ನೀಡುವುದು ನಮ್ಮ ಗುರಿ ಎಂದರು.

ಪಕ್ಷದ ಕಾರ್ಯಕ್ರಮಗಳಿಗೆ ಜಿ.ಟಿ.ದೇವೆಗೌಡರು ಪಾಲ್ಗೊಳ್ಳಲಿದ್ದಾರೆ:

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರಕ್ಕೆ ಶಾಸಕ ಜಿ ಟಿ ದೇವೇಗೌಡ ಗೈರಾಗಿರುವ ಕುರಿತು ಪ್ರತಿಕ್ರಿಯಿಸಿ, ಶಾಸಕ ಜಿ ಟಿ ದೇವೇಗೌಡರು ನನ್ನಿಂದ ಅನುಮತಿ ಪಡೆದೇ ಗೈರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದಾಗಿ ಜಿ ಟಿ ದೇವೇಗೌಡ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.