ಬೆಂಗಳೂರು: ನಿರೀಕ್ಷೆಯಂತೆ ಜೆಡಿಎಸ್ ನಾಯಕ ಆಯನೂರು ಮಂಜುನಾಥ್, ಶಿಕಾರಿಪುರದ ನಾಗರಾಜ್ ಗೌಡ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಚಂದ್ರಪ್ಪ, ಸಚಿವ ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ಯಾವುದೇ ಷರತ್ತುಗಳು ಇಲ್ಲದೆಯೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದೇನೆ. ನಾನು ಹಿಂದೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಗಿದ್ದೆ. ಆದರೆ ಈಗ ಅಂತ ಯಾವ ಕಂಡಿಷನ್ ಕೂಡ ಹಾಕಿಲ್ಲ. ಬಹಳ ದೊಡ್ಡ ಸಂಖ್ಯೆಯ ನಾಯಕರು ಜೊತೆಗಿದ್ದಾರೆ. ಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನನ್ನ ಎಲ್ಲ ಶ್ರಮ ಹಾಕುತ್ತೇನೆ. ಕೆಲವು ಜಿಲ್ಲಾ ನಾಯಕರು ಸಿಲ್ಲಿಯಾಗಿ ಮಾತಾಡಿರಬಹುದು. ಆ ಬಗ್ಗೆ ಜಿಲ್ಲಾಧ್ಯಕ್ಷರು ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೆಸರು ಉಲ್ಲೇಖಿಸಲದೇ ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ಗೆ ತಿರುಗೇಟು ನೀಡಿದರು.
ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ ವಿರೋಧ ವ್ಯಕ್ತಪಡಿಸಿದ್ದರು.