ಮನೆ ರಾಜಕೀಯ ಮೈಸೂರು: ತಂದೆ-ತಾಯಿ ಕಳೆದುಕೊಂಡ ದರ್ಶನ್ ಧ್ರುವನಾರಾಯಣ್’ಗೆ ಜೆಡಿಎಸ್ ಬೆಂಬಲ

ಮೈಸೂರು: ತಂದೆ-ತಾಯಿ ಕಳೆದುಕೊಂಡ ದರ್ಶನ್ ಧ್ರುವನಾರಾಯಣ್’ಗೆ ಜೆಡಿಎಸ್ ಬೆಂಬಲ

0

ಮೈಸೂರು: ತಂದೆ ಆರ್ ಧ್ರುವನಾರಾಯಣ್ ಹಾಗೂ ತಾಯಿ ವೀಣಾ ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ನೋವಿನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರು ಸ್ಪರ್ಧೆಯಿಂದ ಹಿಂದೆ ಸರಿದು ಬೆಂಬಲ ನೀಡುವ ಕುರಿತು ಘೋಷಣೆ ಮಾಡಿದ್ದಾರೆ.

Join Our Whatsapp Group

ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರು ಕಳೆದ ತಿಂಗಳು ತಂದೆ ಆರ್ ಧ್ರುವನಾರಾಯಣ ಅವರನ್ನು ಕಳೆದುಕೊಂಡ ನೋವಿನಲ್ಲಿ ಚುನಾವಣೆ ಪ್ರಚಾರಕ್ಕಿಳಿದಿದ್ದರು. ಆದರೆ, ಇದೀಗ ದರ್ಶನ್ ತಾಯಿ ವೀಣಾರನ್ನು ಸಹ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವರಿಗೆ ಬೆಂಬಲಿಸಲು ಮುಂದಾಗಿದೆ. ಈ ಬಗ್ಗೆ ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತೆನಾಡಿದ ಜಿ.ಟಿ.ದೇವೇಗೌಡ, ದಿವಂಗತ ಆರ್.ಧ್ರುವನಾರಾಯಣ ಮಕ್ಕಳು ಅನಾಥರಾಗಿದ್ದಾರೆ. ಇಬ್ಬರು ಲವ-ಕುಶ ರೀತಿ ಕಾಣುತ್ತಿದ್ದಾರೆ. ತಂದೆ ಕಳೆದುಕೊಂಡ ನೋವು ಇರುವಾಗಲೇ ತಾಯಿ ಕಳೆದುಕೊಂಡಿದ್ದಾರೆ. ಇಂತಹ ದುಃಖದಲ್ಲಿರುವವರ ಎದುರು ಸ್ಪರ್ಧಿಸಲು ನಮಗೆ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಸ್ಪರ್ಧೆ ಮಾಡಬೇಕಾ ಬೇಡ್ವಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮತ್ತೋರ್ವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದ್ದು, ಧ್ರುವನಾರಾಯಣ್ ಅಗಲಿಕೆ ಹಿನ್ನೆಲೆ ದರ್ಶನ್ ಗೆ ಬೆಂಬಲ ಕೊಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಮೈಸೂರು ಭಾಗದ ಶಾಸಕರು ಮುಖಂಡರ ಜೊತೆ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಕಳೆದ ವಾರ ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ಮಾಡಿದ್ದರು. ತಂದೆ ಕಳೆದುಕೊಂಡ ಹಿನ್ನೆಲೆ ಬೆಂಬಲ ಕೊಡುವ ಬಗ್ಗೆ ಚರ್ಚೆಯಾಗಿತ್ತು. ಇದೀಗ ದರ್ಶನ್ ತಾಯಿ ಸಹ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಖಂಡಿತಾ ಬೆಂಬಲ ನೀಡುತ್ತಾರೆ. ಅವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತಾರೆ. ಖುದ್ದು ಕುಮಾರಸ್ವಾಮಿ ಅವರು ದರ್ಶನ್ ಗೆ ಸಾಂತ್ವನ ಹೇಳಿ ಬೆಂಬಲ ಘೋಷಿಸುತ್ತಾರೆ ಎಂದು ಹೇಳಿದರು.