ನವದೆಹಲಿ : ಭಾರತದ ಪ್ರಮುಖ ಎಫ್ಎಂಸಿಜಿ ಕಂಪನಿಗಳಲ್ಲಿ ಒಂದೆನಿಸಿರುವ ಪತಂಜಲಿ ಫೂಡ್ಸ್ ಕಳೆದ ಕ್ವಾರ್ಟರ್ನಲ್ಲಿ ತುಸು ನಿರಾಸೆಯ ರಿಪೋರ್ಟ್ ಬಂದಿದೆಯಾದರೂ, ಮುಂಬರುವ ದಿನಗಳಲ್ಲಿ ಅದರ ಬ್ಯುಸಿನೆಸ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಇದೀಗ ಪತಂಜಲಿ ಫೂಡ್ಸ್ಗೆ ‘Buy’ ರೇಟಿಂಗ್ ಕೊಟ್ಟಿದೆ. ಜೆಫರೀಸ್ Buy ರೇಟಿಂಗ್ ಕೊಟ್ಟಿರುವ ಎಂಟು ಕಂಪನಿಗಳಲ್ಲಿ ಪತಂಜಲಿಯೂ ಒಂದಾಗಿದೆ.
ಜೆಫರೀಸ್ ಸಂಸ್ಥೆಯು ಪತಂಜಲಿ ಷೇರಿಗೆ ಪ್ರೈಸ್ ಟಾರ್ಗೆಟ್ ಅನ್ನು 695 ರೂಗೆ ಏರಿಸಿದೆ. ಅದರ ಅಡುಗೆ ತೈಲದ ಮಾರಾಟ ಹೆಚ್ಚುತ್ತಿರುವುದು, ಹಬ್ಬದ ಸೀಸನ್ನಲ್ಲಿ ಸಾಮಾನ್ಯವಾಗಿ ಮಾರಾಟ ಏರುವುದು, ಪ್ರಮುಖ ಬ್ಯುಸಿನೆಸ್ ವಿಭಾಗಗಳಲ್ಲಿ ಪತಂಜಲಿಯ ಲಾಭ ಹೆಚ್ಚುತ್ತಿರುವುದು ಇವುಗಳನ್ನು ಗಣಿಸಿ ಜೆಫರೀಸ್ ಟಾರ್ಗೆಟ್ ಪ್ರೈಸ್ ಅನ್ನು ಹೆಚ್ಚಿಸಿರುವುದು ತಿಳಿದುಬಂದಿದೆ.
ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಪತಂಜಲಿ ಫುಡ್ಸ್ ಷೇರು ಮತ್ತು ಬ್ಯುಸಿನೆಸ್ಗಳ ಮುಂದಿನ ಓಟ ಹೇಗಿರಬಹುದು ಎಂದು ಮೂರು ಸಾಧ್ಯತೆಗಳನ್ನು ಅಂದಾಜಿಸಿದೆ. ಅದರ ಮುಖ್ಯ ಅಂದಾಜು ಪ್ರಕಾರ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಫುಡ್ಸ್ 2025ರಿಂದ 2028ರ ವರ್ಷದವರೆಗೆ ಶೇ. 9ರ ಸಿಎಜಿಆರ್ನಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು. ಹೀಗಾದರಲ್ಲಿ ಪತಂಜಲಿಯ ಇಪಿಎಸ್ ಶೇ. 19ರಷ್ಟು ಬೆಳೆಯುತ್ತದೆ. ಅದರ ಷೇರುಬೆಲೆ 695 ರೂ ಆಗಬಹುದು ಎಂಬುದು ಜೆಫರೀಸ್ನ ಮೊದಲ ಅಂದಾಜು.
ಎರಡನೇ ಅಂದಾಜು ಪ್ರಕಾರ, ಪತಂಜಲಿ ಫುಡ್ಸ್ನ ಆದಾಯವು ಈ ಮೂರು ವರ್ಷ ಶೇ. 10ರ ಸಿಎಜಿಆರ್ನಲ್ಲಿ ಹೆಚ್ಚಬಹುದು. ಹೀಗಾದಲ್ಲಿ ಷೇರುಬೆಲೆ 760 ರೂಗೆ ಹೋಗುವ ಸಾಧ್ಯತೆ ಇರುತ್ತದೆ. ಪತಂಜಲಿ ಫೂಡ್ಸ್ ಅದೃಷ್ಟ ಕೈಕೊಟ್ಟರೆ ಅದರ ಆದಾಯವು ಶೇ. 5ರ ಸಿಎಜಿಆರ್ನಲ್ಲಿ ಮಾತ್ರವೇ ಬೆಳೆಯಬಹುದು. ಹೀಗಾದಲ್ಲಿ ಷೇರುಬೆಲೆ 480 ರೂಗೆ ಇಳಿಯಬಹುದು ಎಂಬುದು ಜೆಫರೀಸ್ನ ಮೂರನೇ ಅಂದಾಜು.
ಜೆಫರೀಸ್ ಸಂಸ್ಥೆ ಪತಂಜಲಿ ಫುಡ್ಸ್ಗೆ 695 ರೂ ಮತ್ತು 760 ರೂ ಪ್ರೈಸ್ ಟಾರ್ಗೆಟ್ ಕೊಟ್ಟಿದೆ. ಇವತ್ತು ಶುಕ್ರವಾರ (ಸೆ.26) ಅದರ ಷೇರುಬೆಲೆ 589 ರೂ ಇದೆ. 695 ಪ್ರೈಸ್ ಟಾರ್ಗೆಟ್ ಈಡೇರಿದಲ್ಲಿ ಷೇರು ಬೆಲೆ ಶೇ. 18ರಷ್ಟು ಏರಿದಂತಾಗುತ್ತದೆ. ಬೆಲೆ 760 ರೂಗೆ ಏರಿದಲ್ಲಿ ಶೇ. 29ರಷ್ಟು ಲಾಭ ಹೆಚ್ಚಳವನ್ನು ಹೂಡಿಕೆದಾರರು ನಿರೀಕ್ಷಿಸಬಹುದು.














