ದಾವಣಗೆರೆ : ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೋಚಿದ್ದ, ಮೂವರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನ ಮೂಲದ ಶ್ಯಾಮ್ ಸಿಂಗ್ (28) ಕವರ್ ಪಾಲ್(24) ಪ್ರತಾಪ್ ಸಿಂಗ್ (33) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 15.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಆ.30ರಂದು ವಿದ್ಯಾನಗರ ನಿವಾಸಿ ರಂಗನಾಥ ಎಂಬವರ ಮನೆಯ ಇಂಟರ್ ಲಾಕ್ ಒಡೆದು ನುಗ್ಗಿ ಚಿನ್ನಾಭರಣ, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು. ರಂಗನಾಥ ಅವರು ಸೆ.1 ರಂದು ಬೆಂಗಳೂರಿಂದ ಮನೆಗೆ ವಾಪಸ್ ಆದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.
ಆರೋಪಿಗಳ ಪತ್ತೆಗೆ ವಿದ್ಯಾನಗರ ಠಾಣೆ ಸಿಪಿಐ ಶಿಲ್ಪಾ ವೈ.ಎಸ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಗುಜರಾತ್‍ನ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.97 ಲಕ್ಷ ರೂ. ಮೌಲ್ಯದ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1.08 ಲಕ್ಷ ಮೌಲ್ಯದ 1350 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 95 ನಗದು, 34 ಸಾವಿರ ರೂ. ಬೆಲೆಯ 6 ಮೊಬೈಲ್, 3 ಸಾವಿರ ಬೆಲೆಯ ಎರಡು ವಾಚ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ.















