ಮನೆ ದೇವಸ್ಥಾನ ಝರಣಿ ನರಸಿಂಹ ಗುಹಾಲಯ

ಝರಣಿ ನರಸಿಂಹ ಗುಹಾಲಯ

0

ಬೀದರ್: ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರ ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಹೋಗಿ, ದೇವರ ದರ್ಶನ ಪಡೆಯುವುದು ಒಂದು ವಿಶಿಷ್ಟ ಅನುಭವ. ಇಂತಹ ಅನುಭವಕ್ಕೆ ಸಾಕ್ಷಿಯಾಗಿರುವುದು ಬೀದರ್ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇವಾಲಯ. ಇದು ಕರ್ನಾಟಕದ ಅಪರೂಪದ ಯಾತ್ರಾಸ್ಥಳ.

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಂದ ಅಪಾರ ಪ್ರಮಾಣದ ಭಕ್ತರು, ನವ ವಧುವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ. ಮಕ್ಕಳಾಗದ ದಂಪತಿ, ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೆರಿಗೆಗೆ ತವರಿಗೆ ಹೋಗುವ ಮುನ್ನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುವ ರೂಢಿಯಿದೆ. ಮಕ್ಕಳಾದ ಮೇಲೆ ಬಂದು ಮಗುವಿನ ಜಾವಳ ತೆಗೆಸುವ ಅಥವಾ ತೊಟ್ಟಿಲು ಬಿಡುವ ಹರಕೆ ಇಲ್ಲಿ ಸಲ್ಲಿಸುತ್ತಾರೆ.

ನರಸಿಂಹ ಝರಣಿ ಗುಹಾ ದೇವಾಲಯಕ್ಕೆ ಸುಮಾರು 300 ಅಡಿಗಳಷ್ಟು ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ. ಈ ನೀರಿನಲ್ಲಿ ಗಂಧಕ (ಸಲ್ಫರ್)ದ ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ.

ಈ ನೀರಿನಲ್ಲಿ ನಡೆದರೆ ಚರ್ಮದ ರೋಗಗಳು ನಿವಾರಣೆ ಈ ದೇವಾಲಯಕ್ಕೆ ಸಾಗುವ ನೀರಿನಲ್ಲಿ ನಡೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಗುಹೆಯೊಳಗೆ ನಡೆದು ಸ್ವಾಮಿಯ ದರ್ಶನಕ್ಕೆ ಹೋಗುವಾಗ ಧರಿಸಲು ಅಗತ್ಯ ಬಟ್ಟೆ, ಟವೆಲ್, ಲುಂಗಿ, ಮಹಿಳೆಯರಿಗೆ ಪ್ರತ್ಯೇಕ ಸೀರೆ ತರಬೇಕು. ಕೌಂಟರ್‌ ನಲ್ಲಿ ಟಿಕೆಟ್ ಪಡೆದು ಸಾಲಿನಲ್ಲಿ ಗುಹೆ ಮುಂಭಾಗದಿಂದ ನರಸಿಂಹ ದೇವರ ಕಡೆಗೆ ನಡೆದು ಸಾಗಬೇಕು. ಅದಕ್ಕೂ ಮೊದಲು ಗುಹೆಯಿಂದ ಹರಿದು ಗೋಮುಖದ ಮೂಲಕ ಬರುವ ನೀರಿನಲ್ಲಿ ಮೈ ತೊಳೆದುಕೊಳ್ಳಬೇಕು.

ಗುಹೆಯೊಳಕ್ಕೆ ಹೋಗದೇ ಹಿಂದಿರುಗುವವರಿಗೆ ಇಲ್ಲಿಯೇ ಪೂಜೆ, ಮಂಗಳಾರತಿ ಮಾಡಿ ಕೊಡುವ ವ್ಯವಸ್ಥೆಯೂ ಇದೆ. ವಿಶೇಷ ಪೂಜೆ ಮಾಡಿಸುವವರು ಅರ್ಚಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಸಾಮಾನ್ಯ ಪೂಜೆಗಾಗಿ ಅರ್ಚಕರೊಬ್ಬರು ಗುಹೆಯೊಳಗೆ ಇರುತ್ತಾರೆ. ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತವೆ. ಅದನ್ನು ಬಿಟ್ಟರೆ ಇಲ್ಲಿ ವರ್ಷದಲ್ಲಿ ವಿಶೇಷ ಆಚರಣೆಗಳಿಲ್ಲ.

ನರಸಿಂಹ ಝರಣಿ

ಹರಕೆ ಹೊತ್ತವರು ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರ ಇಲ್ಲಿಗೆ ಬರುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ನೈವೇದ್ಯಕ್ಕಾಗಿ ಅಡುಗೆ ಮಾಡಲು ಬೇಕಾದ ಸೌದೆ ಮತ್ತಿತರ ವಸ್ತುಗಳು ದೊರೆಯುತ್ತವೆ. ಎರಡು ಕಣಿವೆಗಳ ನಡುವೆ ಇರುವ ಪ್ರದೇಶದಲ್ಲಿ ಕಟ್ಟಿಗೆಯ ಒಲೆ ಹೂಡಿ ಎಣ್ಣೆ ಹೋಳಿಗೆ, ಅನ್ನ ನೈವೇದ್ಯ ಮಾಡಿ ಅರ್ಪಿಸುತ್ತಾರೆ.

ದೇವಾಲಯದ ಇತಿಹಾಸ ಹಿರಣ್ಯಕಶಪುವಿನ ವಧೆಯ ಬಳಿಕ ನರಸಿಂಹನು ಶಿವ ಭಕ್ತನು ಮತ್ತು ಅಸುರನು ಆದ ಜಲಾಸುರನ ವಧೆ ಮಾಡಲು ಬರುತ್ತಾನೆ. ಯುದ್ಧದ ಬಳಿಕ ಜಲಾಸುರನು ಸೋಲನ್ನಪ್ಪಿ, ಸಾವನ್ನಪ್ಪುವಾಗ ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ದೇವರು ಇಲ್ಲಿನ ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ.

ನರಸಿಂಹ ಝೀರ ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಈ ಸ್ಥಳಕ್ಕೆ ನರಸಿಂಹ ಝೀರ ಎಂದು ಹೆಸರಿಡಲಾಗಿದೆ. ನವೆಂಬರ್‌ ನಿಂದ ಜನವರಿ ನಡುವಿನ ಅವಧಿ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಪ್ರಶಸ್ತ ಕಾಲ. ನಿತ್ಯ ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಗುಹೆಯೊಳಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯಬಹುದು. ಜಂಬಿಟ್ಟಿಗೆ ನೆಲದ ಕಣಿವೆಯಲ್ಲಿ ಇರುವ ಈ ಗುಹಾಲಯದಲ್ಲಿ ವರ್ಷವಿಡೀ ನೀರು ಹರಿಯುತ್ತದೆ. ಗುಹೆಯಲ್ಲಿ ಉಸಿರಾಟಕ್ಕೆ ತೊಂದರೆ ಆಗದಂತೆ ಹೊರಗಿನಿಂದ ಗಾಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಸಂಚಾರಕ್ಕೆ ವ್ಯವಸ್ಥೆ ಬೆಂಗಳೂರಿನಿಂದ ಹೈದರಾಬಾದ್ ​ಗೆ ವಿಮಾನದಲ್ಲಿ ಪ್ರಯಾಣಿಸಿದರೆ ಹೈದರಾಬಾರ್ ​ನಿಂದ ಬೀದರ್‌ಗೆ ರೈಲು ಹಾಗೂ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ನಾಂದೇಡ್‌ ಗೆ ಹೋಗುವ ಎಕ್ಸ್‌ ಪ್ರೆಸ್ ರೈಲು ಬೀದರ್ ಮಾರ್ಗವಾಗಿ ಹೋಗುತ್ತದೆ. ಗುಲ್ಬರ್ಗ ಮತ್ತು ಹೈದರಾಬಾದ್‌ ನಿಂದ ರಸ್ತೆ ಸಂಪರ್ಕವೂ ಇದೆ. ನರಸಿಂಹ ಝರಣಿ ಹೈದರಾಬಾದ್‌ನಿಂದ 120 ಕಿ.ಮೀ, ಗುಲ್ಬರ್ಗ ನಗರದಿಂದ 110 ಕಿ.ಮೀ. ದೂರದಲ್ಲಿದೆ. ಬೀದರ್ ಬಸ್ ನಿಲ್ದಾಣದಿಂದ ಝರಣಿಗೆ ನಗರ ಸಾರಿಗೆಯ ಬಸ್‌ಗ ಳ ಮೂಲಕ ಹೋಗಬಹುದು. ಆಟೋ ರಿಕ್ಷಾಗಳೂ ಕೂಡ ಇಲ್ಲಿ ಲಭ್ಯವಿದೆ.

ಹಿಂದಿನ ಲೇಖನಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲದ್ದಕ್ಕೆ ಸಾವನ್ನು ನಿರ್ಲಕ್ಷ್ಯಿಸಬಾರದು: ಹೈಕೋರ್ಟ್‌
ಮುಂದಿನ ಲೇಖನಕಾರಾಗೃಹಗಳು ಬಂದಿಕಾನೆ ಆಗಬಾರದು, ಪರಿವರ್ತನೆಯ ತಾಣವಾಗಬೇಕು: ಬಿ.ಎಸ್ ರಮೇಶ್