ಮನೆ ಕಾನೂನು ಹೈಕೋರ್ಟ್ ಸಿಜೆ ನೇಮಕಾತಿಯಲ್ಲಿ ಕೇಂದ್ರದ ವಿಳಂಬ ಧೋರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಜಾರ್ಖಂಡ್ ಸರ್ಕಾರ

ಹೈಕೋರ್ಟ್ ಸಿಜೆ ನೇಮಕಾತಿಯಲ್ಲಿ ಕೇಂದ್ರದ ವಿಳಂಬ ಧೋರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಜಾರ್ಖಂಡ್ ಸರ್ಕಾರ

0

ನ್ಯಾ ಎಂ ಎಸ್ ರಾಮಚಂದ್ರರಾವ್ ಅವರನ್ನು ಜಾರ್ಖಂಡ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಮಾಡಿರುವ ಶಿಫಾರಸನ್ನು ಅನುಮೋದಿಸದೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಜಾರ್ಖಂಡ್ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ .

Join Our Whatsapp Group

ನ್ಯಾಯಮೂರ್ತಿ ರಾವ್ ಅವರ ನೇಮಕಕ್ಕೆ ಕೊಲಿಜಿಯಂ ಜುಲೈ 11ರಂದು ಶಿಫಾರಸು ಮಾಡಿತ್ತು ಆದರೆ ಅದನ್ನು ಕೇಂದ್ರ ಸರ್ಕಾರ ಇನ್ನೂ ಅನುಮೋದಿಸಿಲ್ಲ.

ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರು ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಪ್ರತಿವಾದಿಗಳು ರೂಪಿಸಿರುವ ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರೆಯಬಾರದು” ಎಂದು ಮನವಿಯಲ್ಲಿ ಹೇಳಲಾಗಿದೆ.

ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಮಾಡಿದ್ದ ಶಿಫಾರಸುಗಳನ್ನು ಅಂಗೀಕರಿಸುವಲ್ಲಿ ಕೂಡ ಭಾರೀ ವಿಳಂಬವಾಗಿತ್ತು. ಕೊಲಿಜಿಯಂ ಡಿಸೆಂಬರ್ 27, 2023ರಂದು ಒರಿಸ್ಸಾ ಹೈಕೋರ್ಟ್ ನ್ಯಾಯಮೂರ್ತಿ ಬಿ ಆರ್ ಸಾರಂಗಿ ಅವರನ್ನು ಜಾರ್ಖಂಡ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ಶಿಫಾರಸು ಮಾಡಿತ್ತು.ಆದರೆ ಅವರ ನೇಮಕಾತಿ ಶಿಫಾರಸನ್ನು ಕೇಂದ್ರ ಸರ್ಕಾರ ಸರ್ಕಾರ ಜುಲೈ 3, 2024ರಂದಷ್ಟೇ ಅನುಮೋದಿಸಿತ್ತು. ಅದಾಗಿ ಕೇವಲ 15 ದಿನಗಳಲ್ಲಿ ಅವರು ನಿವೃತ್ತರಾದರು ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜಾರ್ಖಂಡ್‌ ಮತ್ತು ದೇಶದ ಉಳಿದ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಅಸಾಧಾರಣ ವಿಳಂಬ ಉಂಟಾಗುತ್ತಿದ್ದು ಇದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ತ್ವರಿತವಾಗಿ ಕಾರ್ಯಪ್ರವೃತ್ತವಾಗಿದ್ದರೂ ಕೇಂದ್ರ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ಇದು ನ್ಯಾಯದಾನದ ಮೇಲೆ ಪರಿಣಾಮ ಬೀರಲಿದ್ದು ಕೇಂದ್ರ ಸರ್ಕಾರದ ವಿಳಂಬ ‘ಸೆಕೆಂಡ್‌ ಜಡ್ಜಸ್ ಮತ್ತು ಥರ್ಡ್‌ ಜಡ್ಜಸ್‌’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳ ಉಲ್ಲಂಘನೆಯಾಗಿದ್ದು ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದು ಅರ್ಜಿ ಹೇಳಿದೆ.