ಗುವಾಹಟಿ (Guwahati)-ಜಾಮೀನು ಮಂಜೂರಾದ ಬೆನ್ನಲ್ಲೇ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ (Jignesh mevani) ಅವರನ್ನು ಮತ್ತೆ ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ ಪ್ರಕರಣದಲ್ಲಿ ಸೋಮವಾರ ಜಾಮೀನು ಪಡೆದ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಪುನಃ ಬಂಧಿಸಿದ್ದಾರೆ.
ಬರ್ಪೆಟಾ ಪೊಲೀಸರು ಜಿಗ್ನೇಶ್ ಮೇವಾನಿ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಬರ್ಪೆಟಾ ಜಿಲ್ಲೆಯಲ್ಲಿ ಜಿಗ್ನೇಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೊಕ್ರಜಾರ್‌ನ ಕೋರ್ಟ್, ಹಲವು ಷರತ್ತುಗಳೊಂದಿಗೆ ಜಿಗ್ನೇಶ್ ಅವರಿಗೆ ಇಂದು ಜಾಮೀನು ಮಂಜೂರು ಮಾಡಿತ್ತು.
ಏಪ್ರಿಲ್ 18ರಂದು ಜಿಗ್ನೇಶ್ ಅವರು ಮಾಡಿರುವ ಟ್ವೀಟ್‌ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‌ನಗರ, ಕಂಭಾತ್ ಹಾಗೂ ವೆರಾವಲ್‌ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್ 20ಕ್ಕೆ ಗುಜರಾತ್‌ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು’ ಎಂದು ಟ್ವೀಟಿನಲ್ಲಿ ಕಂಡಿರುವುದಾಗಿ ಅಸ್ಸಾಂ ಕೊಕ್ರಜಾರ್‌ನ ಅನುಪ್ ಕುಮಾರ್ ಡೇ ದೂರಿನಲ್ಲಿ ತಿಳಿಸಿದ್ದರು.