ಗುವಾಹಟಿ(Guwahati): ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ನೀಡಿರುವ ಬಾರ್ಪೇಟಾ ನ್ಯಾಯಾಲಯದ ಆದೇಶವನ್ನು ಗುವಾಹಟಿ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬಾರ್ಪೇಟಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಪರೇಶ್ ಚಕ್ರವರ್ತಿಯವರ ಅವಲೋಕನವನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ದೇಬಾಶಿಸ್ ಬರುವಾ ವಿಚಾರಣೆ ನಡೆಸಿದರು. ಆದರೆ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ನೀಡಿರುವ ಬಗ್ಗೆ ಯಾವುದೇ ಅಭಿಪ್ರಾಯ ರವಾನಿಸಲಿಲ್ಲ.
ಬಾರ್ಪೇಟಾ ನ್ಯಾಯಾಲಯವು ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ “ಸುಳ್ಳು ಎಫ್‌ಐಆರ್” ದಾಖಲಿಸಿದ್ದಕ್ಕಾಗಿ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಸ್ತುತ ಪ್ರಕರಣದಂತಹ ಸುಳ್ಳು ಎಫ್‌ಐಆರ್ ದಾಖಲಿಸುವುದನ್ನು ತಡೆಯಲು ಮತ್ತು ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿ ಕೊಲ್ಲುವುದು ಅಥವಾ ಗಾಯಗೊಳಿಸುವುದನ್ನು ತಡೆಯಲು ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಇದು ರಾಜ್ಯದಲ್ಲಿ ನಿತ್ಯದ ವಿದ್ಯಮಾನವಾಗಿ ಪರಿಣಮಿಸಿದೆ ಎಂದು ಆರೋಪಿಸಿತ್ತು.
ಜಿಗ್ನೇಶ್ ಮೇವಾನಿಗೆ ಜಾಮೀನು ನೀಡಿದ ಕೆಳಹಂತದ ನ್ಯಾಯಾಲಯವು ತನ್ನ ಮಿತಿಯನ್ನು ಮೀರಿ ಅವಲೋಕನ ಮಾಡಿದೆ. ಕೆಳ ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿವೆ ಎಂದು ನ್ಯಾಯಮೂರ್ತಿ ಬರುವಾ ಹೇಳಿದರು. ರಜೆಯ ಕಾರಣ ಸೋಮವಾರ ನ್ಯಾಯಾಲಯವನ್ನು ಮುಚ್ಚಿದ್ದರಿಂದ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಅವರು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ವಿಶೇಷ ಅನುಮತಿ ಪಡೆದರು. ಈ ಪ್ರಕರಣವು ಮೇ 27ರಂದು ವಿಚಾರಣೆಗೆ ಬರಲಿದೆ.
ಕಳೆದ ಏಪ್ರಿಲ್ 19ರಂದು ಗುಜರಾತ್‌ನ ಪಾಲನ್‌ಪುರ್ ಪಟ್ಟಣದಲ್ಲಿ ಶಾಸಕ ಜಿಗ್ನೇಶ್ ಮೇವಾನಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಕೊಕ್ರಜಾರ್‌ನಲ್ಲಿ ಪ್ರಧಾನಿ ವಿರುದ್ಧದ ಟ್ವೀಟ್‌ಗಾಗಿ ಎಫ್‌ಐಆರ್ ದಾಖಲಾಗಿತ್ತು. ಏಪ್ರಿಲ್ 25 ರಂದು ಕೋಕ್ರಜಾರ್ ನ್ಯಾಯಾಲಯವು ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ ನಂತರ, ನಾಲ್ಕು ದಿನಗಳ ಹಿಂದೆ ಗುವಾಹಟಿಯಿಂದ ಕೊಕ್ರಜಾರ್‌ಗೆ ಪೋಲೀಸರು ಕರೆತರುತ್ತಿದ್ದಾಗ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರನ್ನು ಮತ್ತೆ ಬಂಧಿಸಲಾಗಿದೆ ಎಂದು ತೋರಿಸಲಾಗಿತ್ತು.