ನವದೆಹಲಿ: ಮಲಯಾಳದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ.ವಾಸುದೇವನ್ ನಾಯರ್ (91) ಹೃದಯಾಘಾತದಿಂದಾಗಿ ಬುಧವಾರ ನಿಧನರಾಗಿದ್ದಾರೆ.
ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ಎಂ. ಟಿ ವಾಸುದೇವನ್ ನಾಯರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಮಲಯಾಳಂ ಸಾಹಿತ್ಯ ಮತ್ತು ಚಿತ್ರರಂಗದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಮಾನವ ಭಾವನೆಗಳ ಆಳವಾದ ಅನ್ವೇಷಣೆ ಮೂಲಕ ಹಿಂದಿನ ಪೀಳಿಗೆಯನ್ನು ರೂಪಿಸಿದ್ದು ಮಾತ್ರವಲ್ಲದೆ, ಅನೇಕರಿಗೆ ಸ್ಫೂರ್ತಿ ನೀಡುತ್ತವೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಮಲಯಾಳಂನ ಹೆಸರಾಂತ ಲೇಖಕರಾದ ಎಂ.ಟಿ ವಾಸುದೇವನ್ ನಾಯರ್ ಅವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಬರಹಗಳಲ್ಲಿ ಗ್ರಾಮೀಣ ಭಾರತ ಜೀವಂತವಾಗಿದೆ ಎಂದಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಂ.ಟಿ.ವಾಸುದೇವನ್ ನಾಯರ್ ಅವರು ತಮ್ಮ ಕೃತಿಗಳ ಮೂಲಕ ಕೇರಳದ ಬದುಕಿನ ಸೌಂದರ್ಯ ಮತ್ತು ಸಂಕೀರ್ಣತೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಎಂ.ಟಿ’ ಎಂದೇ ಪ್ರಸಿದ್ಧರಾಗಿದ್ದ ವಾಸುದೇವನ್ ಅವರು ಒಟ್ಟು 9 ಕಾದಂಬರಿ, 19 ಸಣ್ಣ ಕತೆಗಳ ಸಂಕಲನಗಳನ್ನು ರಚಿಸಿದ್ದರು. 6 ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಅವರು, 54 ಚಿತ್ರಗಳಿಗೆ ಚಿತ್ರಕತೆ ಬರೆದಿದ್ದರು. 7 ದಶಕಗಳ ಸಾಹಿತ್ಯಿಕ ಪಯಣದಲ್ಲಿ ಅವರು, ಪ್ರಬಂಧಗಳ ಹಲವು ಸಂಕಲನಗಳನ್ನು ಹಾಗೂ ಸ್ಮರಣ ಸಂಚಿಕೆಗಳನ್ನು ರಚಿಸಿದ್ದರು.
ಅವರ ‘ನಾಲುಕೆಟ್ಟು’ (ಪೂರ್ವಿಕರ ಮನೆ) ಕಾದಂಬರಿಯನ್ನು ಮಲಯಾಳ ಸಾಹಿತ್ಯದ ಮೇರು ಕೃತಿ ಎಂದೇ ಪರಿಗಣಿಸಲಾಗುತ್ತದೆ. ‘ಅರಸುವೀಟ್ಟು’, ‘ಮಂಜು’ ಹಾಗೂ ‘ಕಾಲಮ್’ನಂತಹ ಹಲವು ಮಹಾನ್ ಕೃತಿಗಳನ್ನು ರಚಿಸಿದ್ದರು.
ಸಾಹಿತ್ಯ ಸೇವೆ ಪರಿಗಣಿಸಿ 1995ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಯಲಾರ್ ಪ್ರಶಸ್ತ್ರಿ, ವಲ್ಲತ್ತೋಳ್ ಪ್ರಶಸ್ತಿ, ಎಳುತ್ತಚ್ಚನ್ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ, ಒ.ಎನ್.ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು.