ಜಮ್ಮು/ಕಾಶ್ಮೀರ: ಪೂಂಚ್ ನ ಸಿಂಧ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಸೋಮವಾರ ತಡ ರಾತ್ರಿ 11:30 ರ ಸುಮಾರಿಗೆ ಭದ್ರತಾ ಪಡೆಗಳ ನಡುವೆ ಮೊದಲ ಸುತ್ತಿನ ಎನ್ ಕೌಂಟರ್ ನಡೆದಿದ್ದು, ನಂತರ ಈ ಭಾಗದಲ್ಲಿ ಡ್ರೋನ್ ಕಣ್ಗಾವಲು ಇರಿಸಲಾಗಿತ್ತು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಸೇರಿತ್ತು. ಈ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರು ವಿದೇಶಿ ಭಯೋತ್ಪಾದಕರಾಗಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಮೂಲಗಳ ಪ್ರಕಾರ, ಗಡಿ ನಿಯಂತ್ರಣ ರೇಖೆಯ ಆಚೆಯಿಂದ, ಐಎಸ್ ಐ ಮತ್ತು ಭಯೋತ್ಪಾದಕ ಸಂಘಟನೆಗಳ ಮುಖಂಡರು ಭಯೋತ್ಪಾದಕರಿಗೆ ಒಳನುಸುಳಲು ಮತ್ತು ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಸಮಯದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಪ್ರೇರಣೆ ನೀಡಿರಬಹುದು ಎಂದು ರಕ್ಷಣಾ ತಂಡ ಮಾಹಿತಿ ನೀಡಿದೆ.