ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರ ಜಮೀನಿನ ಜಂಟಿ ಸಮೀಕ್ಷೆ ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಅರ್ಜಿದಾರ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಪಾಲ್ಗೊಂಡಿದ್ದಾರೆ.
ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ನಡೆಯುತ್ತಿದ್ದು, ಡಿಸಿಎಫ್ ಸರೀನಾ ಸಿಕ್ಕಲಿಗಾರ್, ಡಿಡಿಎಲ್‌ಆರ್ ಸಂಜಯ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಶ್ರೀನಿವಾಸಪುರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಕೂಡ ಭಾಗವಹಿಸಿದ್ದಾರೆ.
ರಮೇಶ್ ಕುಮಾರ್ ಸ್ಥಳಕ್ಕೆ ಬಂದು ಸಹಿ ಹಾಕಿ ಸಮೀಕ್ಷೆ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂ 1 ಮತ್ತು 2 ರಲ್ಲಿನ 61.39 ಎಕರೆ ಅರಣ್ಯ ಭೂಮಿಯ ಒತ್ತುವರಿ ಆರೋಪ ಇದೆ. ಹೊಸಹುಡ್ಯ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದೆ.
ನಾಲ್ಕು ತಂಡಗಳನ್ನು ರಚಿಸಿದ್ದು, ರೋವರ್ ಉಪಕರಣ ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ವೆ ಮೂರು ಬಾರಿ ಮುಂದೂಡಿಕೆ:
ಹೈಕೋರ್ಟ್ ನಿರ್ದೇಶನದಂತೆ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2 ರ ಜಮೀನಿನ ಜಂಟಿ ಸಮೀಕ್ಷೆ ಕಾರ್ಯವನ್ನು ಜ.15 ರಂದು ಮುಗಿಸಿ ಜ.30ರ ಒಳಗಡೆ ವರದಿಯನ್ನು ಒಪ್ಪಿಸಬೇಕಿದೆ. ಈಗಾಗಲೇ ಜಂಟಿ ಸರ್ವೆಯನ್ನು ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲಾಗಿದೆ.
ಈ ಮೊದಲು ನ.6, ಆನಂತರ ಡಿ.20, ಬಳಿಕ ಜ.2ಕ್ಕೆ ನಿಗದಿಪಡಿಸಿ ಮುಂದೂಡಲಾಗಿತ್ತು. ಹಿಂದಿನ ಡಿಸಿಎಫ್ ವಿ.ಏಡುಕೊಂಡಲು ಡಿ.20ರಂದು ಜಮೀನಿಗೆ ತೆರಳಿ ಪರಿಶೀಲಿಸಿದ್ದರು. ಆದರೆ, ಡಿ.31ರ ಏಡುಕೊಂಡಲು ಅವರಿಗೆ ಬಡ್ತಿ ಸಿಕ್ಕಿ ವರ್ಗಾವಣೆಯಾಗಿದ್ದು, ನೂತನ ಡಿಸಿಎಫ್ ಸರೀನಾ ಸಿಕ್ಕಲಿಗಾರ್ ಬಂದಿದ್ದಾರೆ.