ಬೆಂಗಳೂರು (Bengaluru): ಚಿತ್ರದುರ್ಗದ ಮುರುಘಾ ಮಠವು ನೀಡಿದ್ದ ʻಬಸವ ಶ್ರೀ ಪ್ರಶಸ್ತಿʼಯನ್ನು ವಾಪಸ್ ನೀಡುವುದಾಗಿ ಪತ್ರಕರ್ತ ಪಿ.ಸಾಯಿನಾಥ್ ತಿಳಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಲಯವು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ಬೆನ್ನಲ್ಲೇ ಸಾಯಿನಾಥ್ ಅವರು ಪ್ರಶಸ್ತಿ ವಾಪಸ್ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸಂತ್ರಸ್ತ ಬಾಲಕಿಯರ ಜತೆ ನಾವಿದ್ದೇವೆ. ಇವರಿಗೆ ನ್ಯಾಯ ದೊರೆಯಬೇಕು ಎನ್ನುವ ಆಶಯದಿಂದ ಬಸವಶ್ರೀ ಪ್ರಶಸ್ತಿ ಮತ್ತು ಚೆಕ್ ಮೂಲಕ ನೀಡಲಾದ 5 ಲಕ್ಷ ರೂ. ಬಹುಮಾನವನ್ನು ಹಿಂತಿರುಗಿಸುತ್ತಿದ್ದೇನೆ ಎಂದಿದ್ದಾರೆ. 2017ರಲ್ಲಿ ಸಾಯಿನಾಥ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪಗಳ ಕುರಿತು ಮಾಧ್ಯಮಗಳ ವರದಿಯಿಂದ ತಿಳಿದು ವಿಚಲಿತನಾಗಿದ್ದೇನೆ ಮತ್ತು ಮನಸ್ಸಿಗೆ ನೋವಾಯಿತು. ಪೋಕ್ಸೋ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯದ ಅಡಿಯಲ್ಲಿ ಶರಣರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಕೃತ್ಯವನ್ನು ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಬಹಿರಂಗಪಡಿಸಲು ಶ್ರಮಿಸಿದ ಮೈಸೂರಿನ ಸರ್ಕಾರೇತರ ಸಂಸ್ಥೆಯಾದ ಒಡನಾಡಿ ಕಾರ್ಯ ಶ್ಲಾಘನೀಯ. ಕರ್ನಾಟಕ ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ಹಂತದಲ್ಲೂ ರಾಜಿಯಾಗದೆಯೇ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.