ಮನೆ ರಾಜಕೀಯ ಕೆರೆ ಒತ್ತುವರಿ ಕುರಿತು ನ್ಯಾಯಾಂಗ ತನಿಖೆಗೆ ಆದೇಶ: ಸಿಎಂ ಬೊಮ್ಮಾಯಿ

ಕೆರೆ ಒತ್ತುವರಿ ಕುರಿತು ನ್ಯಾಯಾಂಗ ತನಿಖೆಗೆ ಆದೇಶ: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಬೆಂಗಳೂರಿನಲ್ಲಿ ನಡೆದಿರುವ ಕೆರೆ ಒತ್ತುವರಿ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗುವುದು ಕೆರೆಗಳ ಕಣ್ಮರೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಕಂದಾಯ ಸಚಿವ ಆರ್‌. ಅಶೋಕ ಅವರು ಸೋಮವಾರ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಾವ ಕೆರೆಯನ್ನು? ಯಾವ ಕಾಲದಲ್ಲಿ ಮುಚ್ಚಲಾಗಿದೆ? ಎಂಬುದನ್ನು ತನಿಖೆ ನಡೆಸುತ್ತೇವೆ. ಒತ್ತುವರಿಗೆ ಕಾರಣವಾದವರು ಯಾರು? ಕೆರೆಗಳನ್ನು ಮುಚ್ಚಿ ನಿರ್ಮಿಸಿದ ಆಸ್ತಿಗಳ ಬೇನಾಮಿ ಮಾಲೀಕರು ಯಾರು? ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಕೆರೆಗಳ ಜಮೀನು ಮತ್ತು ನಿರ್ಬಂಧಿತ ವಲಯದಲ್ಲಿ (ಬಫರ್‌ ಝೋನ್‌) ಅತಿಕ್ರಮಣ, ಕಟ್ಟಡ ನಿರ್ಮಾಣ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2007ರಲ್ಲಿ ಆದೇಶ ಹೊರಡಿಸಿತ್ತು. ಆ ಬಳಿಕವೂ ಹಲವು ಕೆರೆಗಳ ಅತಿಕ್ರಮಣ ನಡೆದಿದೆ. ಇದಕ್ಕೆ ಹೊಣೆ ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಮೂಲ ಸ್ವರೂಪ ಕಳೆದುಕೊಂಡ ಕೆರೆಗಳನ್ನು ದಾಖಲೆಗಳಿಂದ ಅಳಿಸಿಹಾಕುವ ಪ್ರಯತ್ನ 2018ರಲ್ಲಿ ನಡೆದಿತ್ತು. ಭೂ ಕಂದಾಯ ಕಾಯ್ದೆಯ ಸೆಕ್ಷನ್‌–68ರ ಅಡಿಯಲ್ಲಿ ಆ ರೀತಿಯ ತೀರ್ಮಾನ ಕೈಗೊಳ್ಳಲು ಅವಕಾಶ ಇಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ನೀಡಿದ್ದರು. ಅದನ್ನು ಬದಿಗೊತ್ತಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

ಜನರಿಂದ ವಿರೋಧ ವ್ಯಕ್ತವಾದ ಕಾರಣದಿಂದ ಸರ್ಕಾರ ಆ ತೀರ್ಮಾನವನ್ನು ಅನುಷ್ಠಾನಕ್ಕೆ ತಂದಿರಲಿಲ್ಲ. ಮೂಲ ಸ್ವರೂಪ ಕಳೆದುಕೊಂಡಿರುವ ಕೆರೆಗಳ ಮೇಲಿನ ಸಾರ್ವಜನಿಕ ಹಕ್ಕುಗಳನ್ನು ಅಳಿಸಿಹಾಕುವ ಪ್ರಸ್ತಾವ ಆ ತೀರ್ಮಾನದಲ್ಲಿತ್ತು. ಅದು ಬೆಂಗಳೂರಿಗೆ ಸೀಮಿತವಾಗಿರಲಿಲ್ಲ. ಇಡೀ ರಾಜ್ಯಕ್ಕೆ ಅನ್ವಯಿಸುವ ತೀರ್ಮಾನವಾಗಿತ್ತು ಎಂದರು.

ಹಿಂದಿನ ಲೇಖನಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಮುಂದಿನ ಲೇಖನಶಿವ ಷಡಕ್ಷರ ಸ್ತೋತ್ರಮ್