ಬೆಂಗಳೂರು: ʼಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನಿಂದಿಸಿದ್ದೇನೆ ಎಂಬ ಆರೋಪದಡಿ ನನ್ನನ್ನು ಬಂಧನ ಮಾಡಿರುವುದು ಮತ್ತು ನಂತರದಲ್ಲಿ ನಿಗೂಢವಾಗಿ ನಡೆದುಕೊಂಡಿರುವ ಪೊಲೀಸರ ನಡವಳಿಕೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಹೈಕೋರ್ಟ್ ಆದೇಶದಂತೆ ಶುಕ್ರವಾರ ರಾತ್ರಿ ಪೊಲೀಸರ ಬಂಧನದಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದಿದ್ದ ಅವರು ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸದನದ ಒಳಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಭಾಪತಿಯವರ ಅನುಮತಿ ಇಲ್ಲದೇ ಪ್ರಕರಣ ದಾಖಲಿಸಿರುವುದು ಮತ್ತು ಬಂಧಿಸಿರುವುದು ಅಪರಾಧ. ಬಂಧನದ ಬಳಿಕ 15 ಗಂಟೆಗಳ ಕಾಲ ಪೊಲೀಸರು ನನ್ನನ್ನು ಸುತ್ತಾಡಿಸಿದರು. ಆ ಸಂದರ್ಭದಲ್ಲಿ ಅವರು ನಿಗೂಢವಾಗಿ ನಡೆದುಕೊಂಡರು. ಪ್ರಭಾವಿ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿ ನಿರ್ದೇಶನ ನೀಡುತ್ತಿದ್ದರು. ನನ್ನ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂಬ ಅನುಮಾನ ಮೂಡಿತ್ತು ಎಂದರು.
ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಗೃಹ ಇಲಾಖೆ ಯಾರ ಹಿಡಿತದಲ್ಲಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿರುವ ಅನುಮಾನ ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ರವಿ ಒತ್ತಾಯಿಸಿದರು.
ಬೆಳಗಾವಿ ಲಕ್ಷ್ಮೀ ಅವರ ಪ್ರದೇಶ. ಅಲ್ಲಿಂದ ರವಿ ಬದುಕಿ ಬಂದದ್ದೇ ಅದೃಷ್ಟ ಎಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ಮತ್ತು ಕನಕಪುರಗಳು ನಾನಾ ರಿಪಬ್ಲಿಕ್ ಗಳಾ ಎಂದು ಪ್ರಶ್ನಿಸಿದರು.
ನನ್ನ ರಕ್ಷಣೆಯ ಹೊಣೆ ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಶಿವಕುಮಾರ್ ಮಾತನಾಡಿದ್ದಾರೆ. ನಮ್ಮ ಸಂಸ್ಕೃತಿ, ಶಿವಕುಮಾರ್ ಸಂಸ್ಕೃತಿ ಎರಡೂ ಜನರಿಗೆ ಗೊತ್ತು. ಜನರೇ ನಿರ್ಧಾರ ಮಾಡುತ್ತಾರೆ. ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದರು.