ಮನೆ ಸುದ್ದಿ ಜಾಲ ನ್ಯಾ.ವರ್ಮಾ ವಾಗ್ದಂಡನೆ ಪ್ರಕರಣ – ಸಲಹೆಗಾಗಿ ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

ನ್ಯಾ.ವರ್ಮಾ ವಾಗ್ದಂಡನೆ ಪ್ರಕರಣ – ಸಲಹೆಗಾಗಿ ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

0

ನವದೆಹಲಿ : ಅಲಹಾಬಾದ್ ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಲಾದ ಸಮಿತಿಯ ಸಲಹೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಬ್ಬರು ವಕೀಲರನ್ನು ನೇಮಿಸಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಆ.12ರಂದು ಸಮಿತಿ ರಚಿಸುವ ಮೂಲಕ ಸ್ಪೀಕರ್ ಅವರು ನ್ಯಾ.ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಿದ್ದರು. ಇದೀಗ ತನಿಖೆಗಾಗಿ ರಚಿಸಲಾದ ಸಮಿತಿಗೆ ಸಹಾಯ ಮಾಡುವುದಕ್ಕಾಗಿ ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ಸಲಹೆಗಾರರನ್ನಾಗಿ ಔಪಚಾರಿಕವಾಗಿ ನೇಮಿಸಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ ರಚಿಸಿದ ಆಂತರಿಕ ಸಮಿತಿ ಈ ಹಿಂದೆ ನ್ಯಾ.ವರ್ಮಾ ಅವರ ವಿರುದ್ಧ ದೋಷಾರೋಪ ವರದಿ ಮಾಡಿ ಅವರನ್ನು ಪದಚ್ಯುತಗೊಳಿಸಲು ಶಿಫಾರಸು ಮಾಡಿತ್ತು. ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಶಿಫಾರಸು ಮಾಡಬಹುದಾದರೂ ಅವರಿಗೆ ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್ತಿಗೆ ಮಾತ್ರವೇ ಇರುತ್ತದೆ.

ನಂತರ ಕೇಂದ್ರ ಸರ್ಕಾರ ಪ್ರಸ್ತುತ ಅಲಹಾಬಾದ್ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾ.ವರ್ಮಾ ಅವರಿಗೆ ವಾಗ್ದಂಡನೆ ವಿಧಿಸುವುದಕ್ಕಾಗಿ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡಿಸಿತ್ತು. 146 ಸಂಸತ್ ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದರು. ನ್ಯಾಯಾಧೀಶರ ಕಾಯಿದೆಯಡಿ, ಲೋಕಸಭಾ ಸ್ಪೀಕರ್ ಅವರು ತನಿಖೆಗಾಗಿ ಸಮಿತಿ ರಚಿಸಿದ್ದರು.

ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಮೂಲದ ಹಿರಿಯ ವಕೀಲ ಬಿ.ವಾಸುದೇವ ಆಚಾರ್ಯ ಸಮಿತಿಯಲ್ಲಿದ್ದಾರೆ.

ಲೋಕಸಭಾ ಸಚಿವಾಲಯ ಸೆ.19ರಂದು ಹೊರಡಿಸಿದ ಆದೇಶದ ಪ್ರಕಾರ, ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸುತ್ತಿರುವ ಆಧಾರದ ಮೇಲೆ ಸಮಿತಿಗೆ ಸಹಾಯ ಮಾಡಲು ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ನೇಮಿಸಲಾಗಿದೆ.