ಮನೆ ಸ್ಥಳೀಯ ಕೆ.ಆರ್. ಮಿಲ್ ಅಕ್ರಮ ಕಟ್ಟಡ ತೆರವಿಗೆ ವಾರದ ಗಡುವು: ಸಿದ್ದಲಿಂಗಪುರ ಗ್ರಾಪಂ ಎದುರು ವಿವಿಧ ಸಂಘಟನೆಗಳಿಂದ...

ಕೆ.ಆರ್. ಮಿಲ್ ಅಕ್ರಮ ಕಟ್ಟಡ ತೆರವಿಗೆ ವಾರದ ಗಡುವು: ಸಿದ್ದಲಿಂಗಪುರ ಗ್ರಾಪಂ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0

ಮೈಸೂರು : ನಗರದ ಕೆ.ಆರ್.ಮಿಲ್‌ನಲ್ಲಿ ಸಿದ್ದಲಿಂಗಪುರ ಗ್ರಾಪಂ ಕಚೇರಿಯಿಂದ ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಒಂದು ವಾರದೊಳಗೆ ಪಂಚಾಯ್ತಿಯವರು ಅಕ್ರಮ ಕಟ್ಟಡವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಸಿದ್ದಲಿಂಗಪುರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ಮಾತನಾಡಿ, ಕೆಆರ್ ಮಿಲ್ ಆಸ್ತಿಯನ್ನು ವೀರೇಂದ್ರ ಕುಮಾರ್ ಜೈನ್ ಎಂಬವರು ಖರೀದಿ ಮಾಡಿ ಅಲ್ಲಿ ಒಬ್ಬ ಸರ್ಕಾರಿ ಅಧಿಕಾರಿಯನ್ನು ಗನ್ ಪಾಯಿಂಟ್‌ನಲ್ಲಿ ಹೆದರಿಸಿ ಅಕ್ರಮವಾಗಿ ಖರೀದಿ ಮಾಡಿದ್ದಾನೆ. ಬೃಹತ್ ಕಟ್ಟಡ ನಿರ್ಮಾಣಕ್ಕೆ ಯಾವುದೇ ಪರವಾನಗಿ ಪಡೆದಿಲ್ಲ. ಈ ಹಿಂದೆ ಕೆಆರ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ, ಕೈಗಾರಿಕಾ ಉದ್ದೇಶಕ್ಕಾಗಿ ೫೦೦ ಕೋಟಿ ರೂ ಬೆಲೆಬಾಳುವ ಈ ಆಸ್ತಿಯನ್ನು ಕೇವಲ ೭ ಕೋಟಿಗೆ ಖರೀದಿ ಮಾಡಲಾಗಿದೆ. ಇದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿದೆ.ಕೆ.ಆರ್.ಮಿಲ್ ಆಸ್ತಿಯು ಇಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸಲ್ಲಬೇಕು. ಒಂದು ವಾರದೊಳಗೆ ಸಿದ್ದಲಿಂಗಪುರ ಗ್ರಾಪಂ ಅಧಿಕಾರಿಗಳು ಕೆಆರ್ ಮಿಲ್‌ನಲ್ಲಿ ಕಟ್ಟುತ್ತಿರುವ ಅಕ್ರಮ ಕಟ್ಟಡವನ್ನು ತೆರವು ಮಾಡಬೇಕು ಇಲ್ಲದಿದ್ದಲ್ಲಿ ಬೃಹತ್ ಹೋರಾಟಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಪ್ರಸ್ತುತ ಕೈಗಾರಿಕಾ ಉದ್ದೇಶದಿಂದ ಕೆ.ಆರ್.ಮಿಲ್ ಸ್ವತ್ತನ್ನು ಖರೀದಿ ಮಾಡಲಾಗಿದ್ದರೂ ಅಲ್ಲಿ ಕೈಗಾರಿಕೆ ನಿರ್ಮಿಸಿಲ್ಲ. ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಅದೂ ಕೂಡ ಪರವಾನಗಿ ಪಡೆದಿಲ್ಲ. ಈ ಸಂಪೂರ್ಣ ಆಸ್ತಿಯು ಇಲ್ಲಿನ ಕಾರ್ಮಿಕರ ಕುಟುಂಬಗಳಿಗೆ ದಕ್ಕಬೇಕು. ಈ ನಿಟ್ಟಿನಲ್ಲಿ ನಾವು ಯಾವುದೇ ಹೋರಾಟಕ್ಕೂ ಸಿದ್ದ ಎಂದರು. ಇದೇ ಸಂದರ್ಭದಲ್ಲಿ ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷರಾದ ಮಾದೇಶ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರರಾದ ಡಿಪಿಕೆ ಪರಮೇಶ್ವರ್, ಪಿ.ಎಸ್. ನಟರಾಜ್, ಬೆಲವತ್ತ ರಾಮಚಂದ್ರ, ಕರುಣಾಕರ್, ಸಂತೋಷ್ ಕುಮಾರ್, ಮಂಜುಳ, ಅನುರಾಜ್ ಗೌಡ, ಅನಿಲ್‌ಕುಮಾರ್, ರಘು,ಸ್ವಾಮಿ, ಮಹದೇವು ಮುಂತಾದವರು ಇದ್ದರು.